

ಗೋಕರ್ಣ: ಕೇಂದ್ರೀಕೃತ ಅಧಿಕಾರ ವ್ಯವಸ್ಥೆ ಜನರಿಗೆ ಲಭ್ಯವಾಗದೆ ಅದು ಜನರಿಂದ ದೂರಾಗುತ್ತದೆ. ಕಾರಣ ಶಾಸನ ಬದ್ಧ ಅಧಿಕಾರ ವ್ಯವಸ್ಥೆ ವಿಕೇಂದ್ರೀಕರಣ ಆಗುವುದರಿಂದ ಮಾತ್ರ ಅದು ಜನರ ಬಳಿಗೆ ಬರುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀರಾಮಚಂದ್ರಾಪುರ ಮಠ ಸಭಾಂಗಣದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಣ್ಣಿನ ಗುಣ ವಿಶೇಷ: ಸನಾತನ ಭಾರತದ ಆಧ್ಯಾತ್ಮಿಕ, ಧಾರ್ವಿುಕ ಮತ್ತು ಪಾರಂಪರಿಕ ವ್ಯವಸ್ಥೆಯಲ್ಲೂ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಪರಮಾತ್ಮನ ಎಲ್ಲ ಅವತಾರಗಳು ವಿಕೇಂದ್ರೀಕರಣದ ಹೆಜ್ಜೆಗಳಾಗಿವೆ. ರಾಮಾವತಾರವೆತ್ತಿ ವೈಕುಂಠದಿಂದ ಅಯೋಧ್ಯೆಗೆ, ಅಯೋಧ್ಯೆಯಿಂದ ದಕ್ಷಿಣದ ಮೂಲಕ ಲಂಕೆಗೆ ಮತ್ತು ಅಲ್ಲಿಂದ ಮರಳಿ ಅಯೋಧ್ಯೆಗೆ ಪರಮಾತ್ಮ ಸಾಗುತ್ತಾನೆ. ಪರಮಾತ್ಮ ವೈಕುಂಠದಲ್ಲೇ ಇದ್ದು ಕೇಂದ್ರೀಕೃತವಾಗುವುದನ್ನು ಬಿಟ್ಟು ಎಲ್ಲ ಭಕ್ತ ಜನರನ್ನು ಮುಟ್ಟಲು ವಿಕೇಂದ್ರೀಕರಣಗೊಳ್ಳುತ್ತಾನೆ. ಜೀವರು ದೇವರನ್ನು ಮುಟ್ಟಲು ಅಸಾಧ್ಯ. ಆದ್ದರಿಂದ ಎಲ್ಲರನ್ನು ತಲುಪಲು ಆತ ಗುರುವಿನ ರೂಪಿಂದ ಬರುತ್ತಾನೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಸ್ವಾತಂತ್ರ್ಯಾ ನಂತರದಲ್ಲಿ ಮೊಟ್ಟ ಮೊದಲು ರಾಜ್ಯದಲ್ಲಿ ವಿಕೇಂದ್ರೀಕರಣ ಆಡಳಿತಕ್ಕೆ ನಾಂದಿ ಹಾಕಿ ಅದನ್ನು ಸದೃಢಗೊಳಿಸಿದವರು ದಿ. ರಾಮಕೃಷ್ಣ ಹೆಗಡೆಯವರಾಗಿದ್ದಾರೆ. ಎಲ್ಲ ಬಗೆಯಲ್ಲಿ ವಿಕೇಂದ್ರೀಕಣಕ್ಕೆ ಅರ್ಥವಿತ್ತವರು ಅವರು. ಆವರೆಗೂ ಶಾಸಕರಿಗೆ ಹೆಚ್ಚಿನ ಯಾವ ಅಧಿಕಾರವೂ ಇರಲಿಲ್ಲ. ಎಲ್ಲವನ್ನೂ ಅಧಿಕಾರಶಾಹಿಗಳೇ ನಿರ್ಣಯಿಸುವ ಪರಿಪಾಠ ಬೆಳೆದು ನಿಂತಿತ್ತು ಎಂದರು. ಸಮಿತಿ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ವಿಕೇಂದ್ರೀಕರಣಕ್ಕೆ ಇನ್ನಷ್ಟು ಶಕ್ತಿ ತುಂಬುವ ಸಾರ್ಥಕ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಈ ಪ್ರಯತ್ನದ ಮೂಲಕ ರಾಜ್ಯದ ಎಲ್ಲ ಜನ ಪ್ರತಿನಿಧಿಗಳ ಗೌರವ ಪ್ರತಿಷ್ಠೆ ವೃದ್ಧಿಸಿ ವಿಕೇಂದ್ರೀಕರಣದ ಹೊಸ ಬೆಳಕು ಮೂಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಕಾರ್ಯಾಧ್ಯಕ್ಷ ಸಿ.ನಾರಾಯಣ ಸ್ವಾಮಿ, ಉಪಾಧ್ಯಕ್ಷ ವಿ.ವೈ.ಘೊರ್ಪಡೆ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸತೀಶ ಮಾತನಾಡಿದರು.
ಗೋಕರ್ಣ ಪಂಚಾಯತಿ ಉಪಾಧ್ಯಕ್ಷೆ ಶಾರದಾ ಮೂಡಂಗಿ, ಸದಸ್ಯ ರಮೇಶ ಪ್ರಸಾದ, ವಿವಿಧ ಗ್ರಾಪಂ ಅಧ್ಯಕ್ಷರುಗಳಾದ ಆನಂದ ಕವರಿ, ಭಾರತೀ ಗೌಡ, ಧನಶ್ರೀ ಅಂಕೋಲೇಕರ, ತಾಪಂ ಸದಸ್ಯ ಮಹೇಶ ಶೆಟ್ಟಿ, ಯಲ್ಲಾಪುರ ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಸಮಿತಿ ಸಮಾಲೋಚಕರಾದ ಎಸ್.ನಂಜುಂಡ ರಾವ್ ಮತ್ತು ಎಚ್.ವೇಣುಗೋಪಾಲ ಉಪಸ್ಥಿತರಿದ್ದರು.ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಪ್ರಮುಖ ವಿದ್ವಾನ್ ಎಸ್.ಜಿ.ಭಟ್ಟ ನಿರ್ವಹಿಸಿದರು.ರಮೇಶ ಪ್ರಸಾದ ವಂದಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಜನರಿಂದ ಜನರಿಗಾಗಿ ಯೋಜನೆಗಳನ್ನು ರೂಪುಗೊಳಿಸುವ ಪ್ರಯತ್ನಕ್ಕೆ ಉದ್ಯುಕ್ತವಾಗಿದೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ 29 ವಿವಿಧ ಇಲಾಖೆಗಳ ಉತ್ತೇಜನ ಕೂಡ ದೊರೆತಿದೆ.ಪ್ರಮೋದ ಹೆಗಡೆ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ