ಕೇಂದ್ರ ಗೃಹ ಸಚಿವ ಅಮಿತ್ ಶಾ ವಜಾಗೆ ಆಗ್ರಹ

16HDK0005
Published on

ಎಚ್.ಡಿ.ಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಸಹನೆ ಮತ್ತು ದ್ವೇಷದ ಮಾತುಗಳನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ದೇಶದ್ರೋಹ ಕಾಯ್ದೆ ಅಡಿ ಬಂಧಿಸಬೇಕು ಎಂದು ಆಗ್ರಹಿಸಿ ಗುರುವಾರ ಚಿಕ್ಕಮಾದು ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಆಡಳಿತಸೌಧದ ಮುಂಭಾಗ ಸೇರಿದ ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಚಳಿಗಾಲದ ಅಧಿವೇಶನದಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದರೆ ಏಳು ಜನ್ಮಗಳ ಸ್ವರ್ಗಕ್ಕೆ ಹೋಗುತ್ತಿದ್ದೀರಿ ಎಂದು ಮಾತುಗಳನ್ನಾಡುವ ಮೂಲಕ ಅಂಬೇಡ್ಕರ್ ಅವರಿಂದ ಘನತೆಯ ಬದುಕು ಕಟ್ಟಿಕೊಂಡಿರುವ ಕೋಟ್ಯಂತರ ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ದೂರಿದರು.

ಬಳಗದ ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ಮಾತನಾಡಿ, ಸಂವಿಧಾನ ಸುಡುವ ಹಾಗೂ ಸಂವಿಧಾನ ಬದಲಿಸುವ ಹೇಳಿಕೆಗಳನ್ನು ನೀಡುತ್ತಾ, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ವಿರುದ್ಧ ದೇಶಭಕ್ತಿ ಸೃಷ್ಟಿಸಿ ಕೋಮುವಾದದ ಬಲದಿಂದ ರಾಜಕೀಯ ಮಾಡುತ್ತಾ ಅಧಿಕಾರಿಗೆ ಬಂದಿರುವ ಅಮಿತ್ ಶಾ ಅವರು ಈ ಹಿಂದೆ ಗುಜರಾತ್‌ನಲ್ಲಿ ಕೋಮು ಸೌಹಾರ್ದತೆಗೆ ಬೆಂಕಿ ಇಟ್ಟಿದ್ದರು. ನ್ಯಾಯಾಧೀಶರ ಕೊಲೆ ಪ್ರಕರಣದಲ್ಲಿ ಕ್ರಿಮಿನಲ್ ಅಪರಾಧಿಯಾಗಿ ಗಡಿ ಪರಾಗಿದ್ದವರು ಇಂದು ದೇಶದ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಇಂತಹವರ ಬೆಂಬಲಕ್ಕೆ ಪ್ರಧಾನಿ ಮತ್ತು ಬಿಜೆಪಿ ನಿಂತಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ರಾಷ್ಟ್ರಪತಿಗಳು ಅಮಿತಾ ಶಾ ಅವರ ಮೇಲೆ ಕ್ರಮ ಜರುಗಿಸದಿದ್ದರೆ ದೇಶಾದ್ಯಂತ ಚಳವಳಿ ನಡೆಸಲಾಗುವುದು ಎಂದರು.

ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು. ನಾಗರಾಜು, ನರಸಿಂಹಮೂರ್ತಿ, ಶಿವಪ್ಪ ಕೋಟೆ, ಮರಿದೇವಯ್ಯ, ದಾಸನಾಯಕ, ಮಣಿ, ಗಣೇಶ್ ಆಚಾರ್, ಬಸವರಾಜ್, ಮುಜಾಹಿದ್, ಕುಮಾರ್, ಸಿದ್ದನನಾಯಕ, ದೇವ ನಾಯಕ, ಜಯಪ್ಪ, ಸೋಮಣ್ಣ, ಬೆಟ್ಟ ನಾಯಕ, ಮಹೇಶ್ ನಾಯಕ, ಈರನಾಯಕ, ಬೈರನಾಯಕ, ಸೋಮೇಶ್, ಚಿಕ್ಕಣ್ಣ ನಾಯಕ, ಶಿವಲಿಂಗ ನಾಯಕ, ಮರಿಸ್ವಾಮಿ ನಾಯಕ, ಸೋಮಣ್ಣ, ನಾಗ ನಾಯಕ, ತಿಮ್ಮನಾಯಕ, ಚಿಕ್ಕಣ್ಣ, ಚೇತನ್, ವೀರ ನಾಯಕ, ಅಂಕ ನಾಯಕ, ಲಿಂಗ ನಾಯಕ, ನಾಗರಾಜು, ರವಿ, ಉಮೇಶ್, ಗೋವಿಂದನಾಯಕ, ಬಸವ ನಾಯಕ, ಜವರನಾಯಕ, ಮಂಜು, ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net