

ವಿದ್ಯಾಧರ ಮೊರಬಾ ಅಂಕೋಲಾ
ತಾಲೂಕಿನ ಬೆಳಸೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ವಿದ್ಯಾರ್ಥಿಗಳು, ಪಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ತಾಲೂಕು ಕೇಂದ್ರದಿಂದ 6 ಕಿ.ಮೀ. ದೂರದ ಬೆಳಸೆಯಲ್ಲಿ 17.24 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ವಣವಾಗಿದೆ. ಸದ್ಯ ಈ ಶಾಲೆಯಲ್ಲಿ 190 ವಿದ್ಯಾರ್ಥಿನಿಯರು ಹಾಗೂ ಪ್ರಾಚಾರ್ಯ ಸೇರಿ ಒಟ್ಟು 9 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವಸತಿ ಶಾಲೆಯು ಸಕಲ ಸೌಲಭ್ಯ ಹೊಂದಿದೆ. ಆದರೆ, ಬೆಳಸೆಯಿಂದ ಮತ್ತು ಹಿಚ್ಕಡ ಕ್ರೀಡಾ ಮೈದಾನದಿಂದ ವಸತಿ ಶಾಲೆ ತಲುಪುವ ರಸ್ತೆ ಸ್ಥಿತಿ ಹೇಳತೀರದಾಗಿದೆ.
ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಇಲ್ಲಿನ ರಸ್ತೆಯ ದುಸ್ಥಿತಿಯನ್ನು ಕಂಡು ಇದೇನು ಮನುಷ್ಯರು ತಿರುಗಾಡುವ ರಸ್ತೆ ಏನ್ರೀ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಕ್ಷಣ ರಸ್ತೆಯನ್ನು ಸರಿಪಡಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಆ. 14ರಂದು ತಹಸೀಲ್ದಾರ್ ಉದಯ ಕುಂಬಾರ ನಿರ್ದೇಶನದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹತ್ತಿರದ ಚಿರೇಗಲ್ಲು ಮಾಲೀಕರ ಸಹಕಾರದಲ್ಲಿ ರಸ್ತೆಗೆ ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು.
ಈ ಮಾರ್ಗದಲ್ಲಿ ಚಿರೇಗಲ್ಲು ಗಣಿಗಾರಿಕೆಗೆ ತೆರಳುವ ಭಾರಿ ವಾಹನಗಳ ಓಡಾಟದಿಂದ ದುರಸ್ತಿ ಮಾಡಿದ ರಸ್ತೆ ಮತ್ತೆ ಕೆಸರು ಗುಂಡಿಯಂತಾಗಿದೆ. ಉತ್ತಮ ರಸ್ತೆ ನಿರ್ವಣವಾಗಬೇಕು ಎಂಬುದು ವಿದ್ಯಾರ್ಥಿಗಳ ಮತ್ತು ಪಾಲಕರ ಆಶಯವಾಗಿದೆ.
ವಸತಿ ಶಾಲೆಯಲ್ಲಿ ನಮಗೆ ಉತ್ತಮ ಸೌಕರ್ಯಗಳ ಜತೆ ಉತ್ತಮ ಶಿಕ್ಷಣವೂ ದೊರೆಯುತ್ತಿದೆ. ಆದರೆ, ದಿನದ 24 ಗಂಟೆಯೂ ಗಣಿಗಾರಿಕೆಯ ಶಬ್ದದಿಂದಾಗಿ ತರಗತಿ ವೇಳೆ ಪಾಠ ಕೇಳಲು ಮತ್ತು ರಾತ್ರಿ ವೇಳೆ ಓದಲು ತೊಂದರೆಯಾಗುತ್ತದೆ. | ವಜ್ರ ಎಸ್.ಎ ವಸತಿ ನಿಲಯದ ವಿದ್ಯಾರ್ಥಿನಿ
ಮಕ್ಕಳನ್ನು ಭೇಟಿ ಮಾಡಲು ಬರಬೇಕೆಂದರೆ ರಸ್ತೆ ಅತ್ಯಂತ ಕೆಟ್ಟದಾಗಿದೆ. ಆಟೋ ರಿಕ್ಷಾಕ್ಕೆ ದುಪ್ಪಟ್ಟು ಹಣ ನೀಡಿದರೂ ಬರಲೊಪ್ಪುತ್ತಿಲ್ಲ. ಮಕ್ಕಳಿಗೆ ಆರೋಗ್ಯ ಕೆಟ್ಟರೆ ತಕ್ಷಣವೇ ಆಸ್ಪತ್ರೆಗೆ ಹೋಗಲು ಸಾಧ್ಯವಾಗುವುದಿಲ್ಲ. ಗಣಿಗಾರಿಕೆಯ ಭಾರಿ ವಾಹನಗಳು ಓಡಾಡುವುದರಿಂದ ಈ ಭಾಗದಲ್ಲಿ ಉತ್ತಮ ರಸ್ತೆ ಅವಶ್ಯ. ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು. | ನಾರಾಯಣ ಪಿ. ಹರಿಕಂತ್ರ, ಕಾಗಲ, ವಸತಿ ನಿಲಯದ ವಿದ್ಯಾರ್ಥಿ ಪಾಲಕರು
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಹತ್ತಿರ ಚಿರೇಕಲ್ಲು ಗಣಿಗಾರಿಕೆಯಲ್ಲಿ ಯಂತ್ರೋಪಕರಣ ಶಬ್ದದ ತೀವ್ರತೆಗೆ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಮತ್ತು ರಾತ್ರಿ ವೇಳೆ ಓದಲು ತೊಂದರೆ ಆಗುತ್ತಿದೆ ಎಂದು ದೂರಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿ ಇಲಾಖೆಯಿಂದ ಪರವಾನಗಿ ಪಡೆಯಲಾಗಿದೆಯೇ ಎಂದು ಪರಿಶೀಲಿಸಲಾಗುವುದು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣ ಮಾಡುವಂತೆ ಜಿಪಂ ಸಿಇಒ ಅವರಲ್ಲಿ ಮನವಿ ಮಾಡಲಾಗುವುದು. | ಅಜ್ಜಪ್ಪ ಗಂಗಪ್ಪ ಸೊಗಲದ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಾರವಾರ (ಉ.ಕ.)
ಹದಗೆಟ್ಟ ರಸ್ತೆಯಿಂದಾಗಿ ವಸತಿ ಶಾಲೆಗೆ ಬೇಕಾದ ದಿನಸಿ, ತರಕಾರಿ ಮುಂತಾದ ಅಗತ್ಯ ವಸ್ತುಗಳನ್ನು ತರಲು ತೊಂದರೆಯಾಗುತ್ತಿದೆ. ಆಟೋ ರಿಕ್ಷಾದವರು ಇಲ್ಲಿಗೆ ಬರಲು ಒಪ್ಪುವುದಿಲ್ಲ. ಈಗಾಗಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಸ್ತೆ ನಿರ್ವಿುಸುವ ಕುರಿತು ಬೆಳಸೆ ಮತ್ತು ಶೆಟಗೇರಿ ಗ್ರಾಪಂ.ಗೆ ಲಿಖಿತ ಪತ್ರದ ಬೇಡಿಕೆ ಸಲ್ಲಿಸಿದ್ದೇವೆ. | ಅಶೋಕ ಗಾಂವಕರ ಪ್ರಾಚಾರ್ಯರು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬೆಳಸೆ