ಕೆಳದರ್ಜೆ ಬೇಲ್‌ಗಳ ಖರೀದಿಗೆ ಹಿಂದೇಟು

20ark-1
Published on

ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ವರ್ತಕರು ಕೆಳ ದರ್ಜೆಯ ತರಗು ಬೇಲ್‌ಗಳನ್ನು ಕೊಳ್ಳಲು ನಿರಾಕರಿಸುತ್ತಿರುವುದರ ಹಿಂದೆ ಬೆಲೆ ಕುಸಿತದ ಭೀತಿ ಬೆಳೆಗಾರರನ್ನು ಕಾಡುತ್ತಿದೆ.

ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿ 32 ದಿನ ಕಳೆದರೂ ಗುಣಮಟ್ಟದ ತಂಬಾಕು ಖರೀದಿಸಲಾಗುತ್ತಿದೆಯೇ ಹೊರತು ಕೆಳ ದರ್ಜೆಯ ಬೇಲ್‌ಗಳನ್ನು ಕೊಳ್ಳಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಗುಣಮಟ್ಟದ ಬೇಲ್‌ಗಳ ಜತೆಗೆ ಮಧ್ಯಮ ದರ್ಜೆ ಹೊಗೆಸೊಪ್ಪು ಕೊಳ್ಳಲು ಆಸಕ್ತಿ ತೋರುತ್ತಿರುವ ವರ್ತಕರು ಕೆಳ ದರ್ಜೆಯ ಬೇಲ್‌ಗಳ ಖರೀದಿಗೆ ಮುಂದಾಗಿಲ್ಲ. ಮಾರಾಟವಾಗದ ಕಾರಣ ರೈತರೂ ಮಾರುಕಟ್ಟೆಗೆ ಕೆಳ ದರ್ಜೆಯ ಬೇಲ್‌ಗಳನ್ನು ತರುತ್ತಿಲ್ಲ. ಬೆಲೆ ಇಳಿಕೆ ಮಾಡಿದ ನಂತರ ಕೆಳ ದರ್ಜೆಯ ಬೇಲ್‌ಗಳನ್ನು ಖರೀದಿಸುವ ಹುನ್ನಾರ ನಡೆದಿದೆ ಎನ್ನುವ ಆರೋಪ ರೈತರಿಂದ ಕೇಳಿಬರುತ್ತಿದೆ.

ಈ ಬಾರಿ ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಹೊಗೆಸೊಪ್ಪು 410 ರೂ.ಗರಿಷ್ಠ ದರಕ್ಕೆ ಮಾರಾಟವಾಗಿತ್ತು. ಇಲ್ಲಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಕೆ.ಜಿ. ತಂಬಾಕು ಗರಿಷ್ಠ 292 ರೂ.ಗೆ ನೀಡಲಾಗುತ್ತಿದೆ. ಆಂಧ್ರಪ್ರದೇಶದ ಮಾರುಕಟ್ಟೆಗೆ ಹೋಲಿಸಿದರೆ ಇಲ್ಲಿನ ರೈತರು 100 ರೂ. ನಷ್ಟ ಅನುಭವಿಸುವಂತಾಗಿದೆ. ಆಂಧ್ರಪ್ರದೇಶದ ಹೊಗೆಸೊಪ್ಪು ಬೆಳೆಗಾರರಿಗೆ ನ್ಯಾಯ ಒದಗಿಸಿದ್ದ ವರ್ತಕರು ಇಲ್ಲಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ವರ್ತಕರು ಎರಡು ರಾಜ್ಯಗಳ ಬೆಳೆಗಾರರ ನಡುವೆ ಬೆಲೆ ನೀತಿ ತಾರತಮ್ಯ ಎಸಗಲಾಗುತ್ತಿದೆ ಎನ್ನುವುದ ರೈತರ ಆರೋಪವಾಗಿದೆ

ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕ ಖುಷಿಯಲ್ಲಿ ಇಲ್ಲಿನ ರೈತರು ಈ ಬಾರಿ ತಂಬಾಕು ಉತ್ಪಾದಿಸಲು ಹೆಚ್ಚು ಉತ್ಸುಕತೆ ತೋರಿದ್ದರು. ಒಂದು ಕಡೆ ಅತಿವೃಷ್ಟಿ ಸಂಕಷ್ಟ ಮತ್ತೊಂದು ಕಡೆ ಬೆಳೆಗೆ ಅಧಿಕ ವೆಚ್ಚ ಮಾಡಿ ಹೊಗೆಸೊಪ್ಪು ಉತ್ಪಾದಿಸಿದ್ದಾರೆ. ಆಂಧ್ರಪ್ರದೇಶದ ರೈತರಷ್ಟೆ ಇಲ್ಲಿನ ರೈತರು ತಂಬಾಕು ಉತ್ಪಾದನೆಗೆ ಹೆಚ್ಚು ಹಣ ವ್ಯಯಿಸಿದ್ದಾರೆ. ಆದರೆ ಇಲ್ಲಿನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಬೆಲೆ ಕುಸಿತ ಕಂಡಿರುವುದು ಬೆಳೆಗಾರರನ್ನು ದಿಕ್ಕು ತೋಚದ ಸ್ಥಿತಿಗೆ ದೂಡಿದೆ. ಈ ನಡುವೆ ಗುಣಮಟ್ಟದ ತಂಬಾಕಿನ ಜತೆ ಕೆಳ ದರ್ಜೆಯ ಬೇಲ್‌ಗಳು ಏಕಕಾಲದಲ್ಲಿ ಮಾರಾಟವಾಗುತ್ತಿಲ್ಲ.

ತಂಬಾಕು ಮಂಡಳಿ ಕಳೆದ ವರ್ಷ ಎರಡನೇ ಬಾರಿಗೆ ಹೊಗೆಸೊಪ್ಪು ಬೆಳೆಯಲು ರೈತರಿಗೆ ಅವಕಾಶ ನೀಡಿರಲಿಲ್ಲ. ಸಸಿ ಮಡಿ ಬೆಳೆಸಿರುವ ರೈತರ ತಂಬಾಕು ಪರವಾನಗಿ ರದ್ದುಗೊಳಿಸುವ ಬೆದರಿಕೆಯನ್ನೂ ಒಡ್ಡಿದ್ದರು. ಆದರೆ ಈ ಬಾರಿ ಅತಿವೃಷ್ಟಿ ನೆಪ ಮುಂದಿಟ್ಟುಕೊಂಡು ಎರಡನೇ ಬಾರಿಗೆ ತಂಬಾಕು ಬೆಳೆಯಲು ಅವಕಾಶ ನೀಡಲಾಗಿದೆ. ತಂಬಾಕು ಉತ್ಪಾದನೆ ಹೆಚ್ಚಿಸಿ ಬೆಲೆ ಇಳಿಸುವ ಹುನ್ನಾರ ನಡೆಸಲಾಗಿದೆ ಎನ್ನುವುದು ಬೆಳೆಗಾರರ ಆರೋಪವಾಗಿದೆ.

ಫಸಲ್ ಬಿಮಾ ಯೋಜನೆಗೆ ಒಳಪಡದ ಬೆಳೆ: ತಂಬಾಕು ಬೆಳೆಯನ್ನು ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಒಳಪಡಿಸಿಲ್ಲ ಎನ್ನುವ ಕೊರಗು ರೈತರಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ ಸಂಕಷ್ಟ ಎದುರಿಸಿ ಕಳೆದ 40 ವರ್ಷಗಳಿಂದ ಹೊಗೆಸೊಪ್ಪು ಬೆಳೆಯಲಾಗುತ್ತಿದೆ. ತಂಬಾಕಿನಿಂದ ತಯಾರಾಗುವ ಉತ್ಪನ್ನಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ವಿದೇಶಿ ವಿನಿಮಯ ಮತ್ತು ಮಾರಾಟ ತೆರಿಗೆಯಿಂದ ಕೋಟಿಗಟ್ಟಲೆ ಆದಾಯವಿದೆ. ಒಂದೆಡೆ ಬೆಳೆಗೆ ಬೆಲೆ ಸ್ಥಿರತೆ ಇಲ್ಲ. ಇನ್ನೊಂದೆಡೆ ಬೆಳೆಗಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಫಲಾನುಭವಿಯೂ ಅಲ್ಲ. ಅಲ್ಲದೇ ಹೊಗೆಸೊಪ್ಪು ಮಾರಾಟಕ್ಕೆ ವಿಧಿಸುತ್ತಿರುವ ಮಾರಾಟ ತೆರಿಗೆ ಹಾಗೂ ಜಿಎಸ್‌ಟಿಯಲ್ಲಿ ವಿನಾಯಿತಿ ನೀಡಿಲ್ಲ, ಬೆಳೆಗಾರರನ್ನು ಶೋಷಣೆ ಮಾಡಲಾಗುತ್ತಿದೆ ಎಂಬುದು ರೈತರ ಅಳಲಾಗಿದೆ.

ಮಾರುಕಟ್ಟೆ ದರ ವಿವರ: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆ ಪ್ಲಾಟ್ ಫಾರ್ಮ್ 7ರಲ್ಲಿ ಕಳೆದ 32 ದಿನಗಳಿಂದ ನಡೆದ ಹರಾಜಿನಲ್ಲಿ 1.33 ಮಿಲಿಯನ್ ಕೆ.ಜಿ. ಹೊಗೆಸೊಪ್ಪು ಖರೀದಿಸಲಾಗಿದ್ದು, 35.94 ಕೋಟಿ ರೂ. ವಹಿವಾಟು ನಡೆದಿದೆ. ಒಂದು ಕೆ.ಜಿ.ಹೊಗೆಸೊಪ್ಪಿಗೆ ಗರಿಷ್ಠ 292 ರೂ.ಹಾಗೂ ಕನಿಷ್ಠ 230 ರೂ.ನೀಡಲಾಗಿದ್ದು, ಬೆಳೆಗಾರರಿಗೆ ಸರಾಸರಿ 269.49 ರೂ.ಬೆಲೆ ಸಿಕ್ಕಿದೆ. ಪ್ಲಾಟ್ ಫಾರ್ಮ್ 63ರಲ್ಲಿ 1.37 ಮಿಲಿಯನ್ ಕೆ.ಜಿ.ಗೆ ತಂಬಾಕು ಕೊಳ್ಳಲಾಗಿದ್ದು 37.31 ಕೋಟಿ ರೂ. ವಹಿವಾಟು ನಡೆದಿದೆ. ಗರಿಷ್ಠ 292 ಹಾಗೂ ಕನಿಷ್ಠ 230 ರೂ. ನೀಡಲಾಗಿದ್ದು ಬೆಳೆಗಾರರಿಗೆ 270.79 ರೂ. ಸರಾಸರಿ ದರ ದೊರೆತಿದೆ.

ಆಂಧ್ರಪ್ರದೇಶದಲ್ಲಿ ವರ್ತಕರು 400 ರೂ.ಗರಿಷ್ಠ ದರ ನೀಡಿ ಇಲ್ಲಿ 292 ರೂ. ನೀಡುತ್ತಿದ್ದು ಈ ಭಾಗದ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ತಂಬಾಕು ಉತ್ಪಾದಿಸಲು ಎಲ್ಲ ರೈತರು ಒಂದೇ ತೆರನಾದ ಹಣ, ಶ್ರಮ ವ್ಯಯಿಸಬೇಕಿದೆ. ಬೆಲೆ ತಾರತಮ್ಯ ನೀತಿ ಸರಿಯಲ್ಲ. ಬೆಳೆಗಾರರ ಹಿತ ಕಾಯಬೇಕಿದ್ದ ಮಂಡಳಿ ಕಣ್ಮುಚ್ಚಿ ಕುಳಿತಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಹೊಗೆಸೊಪ್ಪಿನ ಜತೆಗೆ ಕೆಳ ದರ್ಜೆಯ ಬೇಲ್‌ಗಳ ಖರೀದಿ ನಡೆಯುತ್ತಿಲ್ಲ. ಸರ್ಕಾರ ಮತ್ತು ಮಂಡಳಿ ಮಧ್ಯಪ್ರವೇಶಿಸಿ ಬೆಂಬಲ ಬೆಲೆಯಲ್ಲಿಕೊಳ್ಳಲು ಅಗತ್ಯ ಕ್ರಮ ವಹಿಸಿ ಬೆಲೆ ನಷ್ಟ ತಪ್ಪಿಸಬೇಕು. ಯೋಗಣ್ಣ, ಅಧ್ಯಕ್ಷ ತಾಲೂಕು ರೈತ ಸಂಘ ತಂಬಾಕು ಬೆಳೆಯುವ ಜಿಂಬಾಬ್ವೆ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಉತ್ಪಾದನೆ ಕುಸಿದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ದರ ಏರಿಕೆ ಕಂಡಿತು. ಈಗ ಬೇಡಿಕೆಗೆ ಅನುಗುಣವಾಗಿ ಕೊಳ್ಳಲಾಗುತ್ತಿದೆ. ಕಳೆದ ವರ್ಷ ಆರಂಭದಲ್ಲಿ 230 ರೂ. ಸರಾಸರಿ ದರ ಸಿಕ್ಕಿತ್ತು. ಈ ಬಾರಿ 270 ರೂ.ಗೆ ಏರಿಕೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಬೆಲೆ ಸಿಗುತ್ತಿದೆ. ಕೆಳದರ್ಜೆಯ ತಂಬಾಕು ಖರೀದಿಸಲು ವರ್ತಕರೊಂದಿಗೆ ಮಾತುಕತೆ ನಡೆದಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಬೇಲ್‌ಗಳ ನೋ ಬಿಡ್‌ಗಳ ಸಂಖ್ಯೆಯನ್ನೂ ಇಳಿಸಲಾಗಿದೆ. ಲಕ್ಷ್ಮಣ್‌ರಾವ್, ಪ್ರಾದೇಶಿಕ ವ್ಯವಸ್ಥಾಪಕ ತಂಬಾಕು ಮಾರುಕಟ್ಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net