ಕೆಲಸದಲ್ಲಿ ಪ್ರಾಮಾಣಿಕತೆ ರೂಢಿಸಿಕೊಳ್ಳಿ

bkt-10-7
ಬಾಗಲಕೋಟೆ ನಗರದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ 1983 ರಿಂದ 1989 ರವರೆಗೆ ಕಲಿತ ಹಳೆಯ ವಿದ್ಯಾರ್ಥಿ ಗಳಿಂದ ಗುರು ನಮನ ಕಾರ್ಯಕ್ರಮ ನಡೆಯಿತು
Published on

ಬಾಗಲಕೋಟೆ: ನಾವು ಇನ್ನೊಬ್ಬರಿಗೆ ಪಾಠ ಮಾಡಬೇಕಾದರೆ ಮೊದಲು ನಾವು ಕೆಲಸದಲ್ಲಿ ಶಿಸ್ತುಘಿ, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಎಂ.ಐ.ಚಿಕ್ಕನರಗುಂದ ಹೇಳಿದರು.

ನಗರದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ 1983 ರಿಂದ 1989 ರವರೆಗೆ ಕಲಿತ ಹಳೆಯ ವಿದ್ಯಾರ್ಥಿ ಗಳಿಂದ ಹಮ್ಮಿಕೊಂಡ ಗುರು ನಮನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಕರಷ್ಟೇ ಅಲ್ಲ ಮನೆಯಲ್ಲಿ ಪಾಲಕರು ಮಾರ್ಗದರ್ಶನ ಮಾಡಬೇಕು. ಕಲಿತ ಎಲ್ಲ ಮಕ್ಕಳೂ ಡಾಕ್ಟರ್, ಎಂಜಿನೀಯರ್ ಆಗಲು ಸಾಧ್ಯವಿಲ್ಲ, ಅವರ ಆಸೆ, ಅಭಿರುಚಿ ತಕ್ಕಂತೆ ಅವರಿಗೆ ಶಿಕ್ಷಕರು, ಪಾಲಕರು ಪ್ರೋತ್ಸಾಹಿಸಬೇಕು ಎಂದರು.

ನಿವೃತ್ತ ಶಿಕ್ಷಕ ಜಿ.ಕೆ.ಖಾಸನೀಸ್ ಸನ್ಮಾನ ಸ್ವೀಕರಿಸಿ, ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂದು ಈಗ ಶಾಲೆಯ ಮುಖ್ಯದ್ವಾರದಲ್ಲಿ ಬರೆಯುತ್ತಿದ್ದಾರೆ. ಆದರೆ ಈ ಸಂಸ್ಕೃತಿ ಸರಕಾರಿ ಶಾಲೆಯಲ್ಲಿ ಈ ಹಿಂದೆಯೇ ರೂಢಿಯಲ್ಲಿದೆ. ಈ ಶಾಲೆಯಲ್ಲಿ ಕೆಲಸ ಮಾಡಿದ ಎಲ್ಲ ಶಿಕ್ಷಕರು ಮುಖ್ಯಗುರುಗಳಾಗಿ ನಿವೃತ್ತಿ ಹೊಂದಿದ್ದೇವೆ ಎಂಬ ಹೆಮ್ಮೆ ನಮ್ಮೆಲ್ಲರಿಗೂ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯಗುರು ಎಂ.ಐ.ದೊಡ್ಡಪ್ಪನವರ, ಅಕ್ಷರ ಜ್ಞಾನ ಅನ್ನುವುದು ಅನ್ನದ ಅಗಳು ಇದ್ದ ಹಾಗೆ. ಅನ್ನ ಹೊಟ್ಟೆ ತುಂಬಿಸಿದರೆ ಅಕ್ಷರ ಬದುಕು ರೂಪಿಸುತ್ತದೆ. ಕಾಲೇಜ್, ಹೈಸ್ಕೂಲ್‌ಗಳಲ್ಲಿ ಸಾಮಾನ್ಯವಾಗಿ ಗುರುನಮನ ಸಲ್ಲಿಸಲಾಗುತ್ತದೆ. ಆದರೆ ಈ ವಿದ್ಯಾರ್ಥಿಗಳ ತಾವು ಕಲಿತ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗುರುನಮನ ಸಲ್ಲಿಸುತ್ತಿರುವುದು ಸಂತೋಷದ ವಿಷಯ ಎಂದರು.

ಯಲ್ಲಪ್ಪ ಸನಿಕ್ಯಾನವರ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ನಿವೃತ್ತ ಶಿಕ್ಷಕ ಎಸ್.ಜೆ.ಹಿರೇಮಠ, ಆರ್.ಡಿ.ಲಮಾಣಿ ಹಾಗೂ ದಿ. ಪಿ.ಬಿ.ದೇಶಪಾಂಡೆ ಗುರುಗಳು ಗಣಿತ, ಒಡೆಯರ್ ಗುರುಗಳು ಕನ್ನಡ ವಿಷಯ ಮನದಟ್ಟಾಗಿ ಹೇಳಿಕೊಡುತ್ತಿದ್ದನ್ನು ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರು ಸ್ಮರಿಸಿದರು. ಸಂಘದ ಸದ್ಯಸರು ಶಾಲೆ ಒಂದು ಪ್ರೋಜೆಕ್ಟರ್ ಹಾಗೂ ಮೈಕ್ ಸೆಟ್ ದೇಣಿಗೆ ನೀಡಿದರು.

ಸರಕಾರಿ ಹೆಣ್ಣು ಮಕ್ಕಳ ಶಾಲೆ ಮುಖ್ಯಗುರು ಎಂ.ಐ.ಗುಡಿಮನಿ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ರಾಯ್ಕರ, ಸತೀಶ ರಾಠೋಡ, ಜಯಪ್ರಕಾಶ ಬನ್ನಿಘಿ, ಪ್ರಶಾಂತ ಝಿಂಗಾಡೆ, ಸಂಜೀವ ದೇಶಪಾಂಡೆ, ಪ್ರಕಾಶ ಬಳಿಗಾರ, ರಾಘವೇಂದ್ರ ನಾನಾವಟೆ, ಮಹಮ್ಮದಗೌಸ್ ಜಮಾದಾರ, ಶಂಕರ ತಾಳಿಕೋಟೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net