

ಮಳವಳ್ಳಿ: ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ನನ್ನ ವೇಗಕ್ಕೆ ಶ್ರಮವಹಿಸಿ ಕೆಲಸ ಮಾಡುವುದಾರೆ ಇರಿ. ಇಲ್ಲವಾದಲ್ಲಿ ನಾನು ಕ್ರಮ ತೆಗೆದುಕೊಳ್ಳುವುದಕ್ಕೂ ಮೊದಲೇ ನೀವೆ ಜಾಗ ಖಾಲಿ ಮಾಡಿ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಇಲಾಖಾವಾರು ಅಭಿವೃದ್ಧಿ ಕೆಲಸಗಳಿಗೆ ಬಿಡುಗಡೆಯಾಗಿರುವ ಅನುದಾನ, ಹಣ ಬಳಕೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಪಡೆದರು. ತಾಲೂಕಿನ ವ್ಯಾಪ್ತಿಯಲ್ಲಿ ಕೆಲ ತಿಂಗಳ ಹಿಂದೆ ಸುರಿದ ಮಳೆಯಿಂದ ಹಾನಿಯಾಗಿರುವ ರಸ್ತೆ, ಕೆರೆ ಏರಿ, ಸೇತುವೆಗಳ ದುರಸ್ತಿಗೆ ಶೀಘ್ರ ಕ್ರಮ ವಹಿಸಬೇಕು. ಮಳವಳ್ಳಿ-ಮೈಸೂರು ಮುಖ್ಯ ರಸ್ತೆ, ಮತ್ತಿತಾಳೇಶ್ವರ ದೇವಸ್ಥಾನಕ್ಕೆ ತೆರಳುವ ಕಂದೇಗಾಲ ಮಾರ್ಗದ ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ. ಬೆಳಕವಾಡಿ ಗ್ರಾಮದಲ್ಲಿ ರಸ್ತೆ ವಿಸ್ತರಣೆಗೆ ಕ್ರಮವಹಿಸುವಂತೆ ಪಿಡಬ್ಲುೃಡಿ ಇಂಜಿನಿಯರ್ ಪುಟ್ಟಸ್ವಾಮಿ ಅವರಿಗೆ ಸೂಚನೆ ನೀಡಿದರು.
ಪೊಲೀಸರು ಅಕ್ರಮ ಚಟುವಟಿಕೆ ನಡೆಸುವ ವ್ಯಕ್ತಿಗಳೊಂದಿಗೆ ಶಾಮೀಲಾಗಿರುವ ಮಾಹಿತಿ ಇದೆ. ಇಲ್ಲಿಯವರೆಗೆ ನಡೆದಿರುವುದು ನನಗೆ ಬೇಡ. ಇನ್ನು ಮುಂದೆ ಕಾನೂನು ಸುವ್ಯವಸ್ಥೆ ಕಾಪಾಡುವ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಕೆಲಸ ಮಾಡಿ. ಪೊಲೀಸ್ ಠಾಣೆಗಳಲ್ಲಿ ಸುಳ್ಳು ಜಾತಿ ನಿಂದನೆ ಪ್ರಕರಣಗಳಿಗೆ ಕಡಿವಾಣ ಹಾಕಿ. ಪಟ್ಟಣದಲ್ಲಿ ಮಿತಿ ಮೀರಿದ ಅಪರಾಧ ಪ್ರಕರಣಗಳ ಬಗ್ಗೆ ನಿಗಾ ವಹಿಸುವಂತೆ ಡಿವೈಎಸ್ಪಿ ನವೀನ್‌ಕುಮಾರ್‌ಗೆ ಸಲಹೆ ನೀಡಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಗೈರುಹಾಜರಿ ಕುರಿತು ಆರೋಪಗಳಿವೆ. ಸಿಬ್ಬಂದಿ ಕೊರತೆಯಿದ್ದರೆ ಮಾಹಿತಿ ನೀಡಿ. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ವರದಿ ಸಿದ್ಧಪಡಿಸಿ ನೀಡಿ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಅವರಿಗೆ ಹೇಳಿದರು.
ಪಟ್ಟಣದ 24*7 ಕುಡಿಯುವ ನೀರು ಯೋಜನೆ, ಯುಜಿಡಿ ಮತ್ತು ಅವೈಜ್ಞಾನಿಕ ರೋಡ್ ಕಟಿಂಗ್‌ಗಳ ಬಗ್ಗೆ ಯಾರು ಕಾರಣರಾಗಿದ್ದಾರೋ ಅವರ ವಿರುದ್ಧ ಕ್ರಮವಹಿಸಿ ಎಂದು ಮುಖ್ಯಾಧಿಕಾರಿ ಮಹದೇವು ಅವರಿಗೆ ಸೂಚಿಸಿದರು.
ತಾಲೂಕು ವ್ಯಾಪ್ತಿಯಲ್ಲಿ ನಡೆದಿರುವ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ, ಮೀಟರ್ ಅಳವಡಿಸದಂತೆ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದ ಮುಂಭಾಗದ ರಸ್ತೆ ಬದಿಯಲ್ಲಿ ಪೀಠೋಪಕರಣ ಮಾರಾಟ ಮಾಡುವ ವ್ಯಕ್ತಿಯೊಬ್ಬ ಸಂಜೆ ನಂತರ ವಸತಿನಿಲಯದ ಆವರಣದಲ್ಲಿ ಪೀಠೋಪಕರಣಗಳನ್ನು ಇಟ್ಟುಕೊಳ್ಳುತ್ತಿದ್ದಾನೆ. ಇದಕ್ಕೆ ಎಷ್ಟು ಹಣ ಪಡೆಯುತ್ತಿದ್ದೀರಿ ಎಂದು ಸಮಾಜ ಕಲ್ಯಾಣ ಅಧಿಕಾರಿ ಜನಾರ್ದನ್‌ಗೆ ತರಾಟೆ ತೆಗೆದುಕೊಂಡರು.
ಇದಕ್ಕೆ ಸಹಕರಿಸಿದ ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಭವನದಲ್ಲಿ ಅಳವಡಿಸಿರುವ ನಾಮಫಲಕ ತೆರವಿಗೆ ಜಿಲ್ಲಾಧಿಕಾರಿಗೆ ಸ್ಪೀಕರ್ ಆದೇಶಿಸಿದ್ದು, ಕೂಡಲೇ ಈ ಮಾಹಿತಿ ಪಡೆದು ಫಲಕ ತೆರವಿಗೆ ಕ್ರಮ ವಹಿಸುವಂತೆ ತಿಳಿಸಿದರು.
ತಹಸೀಲ್ದಾರ್ ಲೋಕೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ, ಡಿವೈಎಸ್‌ಪಿ ನವೀನ್‌ಕುಮಾರ್ ಇತರರಿದ್ದರು.