

ಅರಸೀಕೆರೆ: ತಾಲೂಕಿನ ಜಾವಗಲ್ ಹೋಬಳಿ ಕೋಳಗುಂದ ಗ್ರಾಮದ ಕೆರೆಯಲ್ಲಿ ಭಾನುವಾರ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹಾಸನದ ಲಕ್ಷ್ಮೀಪುರ ಬಡಾವಣೆಯ ನಿವಾಸಿ ಹಾಗೂ ಹಾಸನದ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಗರ್(18) ಮೃತಪಟ್ಟವನು.
ಕೋಳಗುಂದದಲ್ಲಿದ್ದ ದೊಡ್ಡಪ್ಪನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹಾಸನದಿಂದ ಬಂದಿದ್ದ. ರಜೆ ಹಿನ್ನೆಲೆಯಲ್ಲಿ ಆತ ನಾಲ್ವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಸಾಗರ್ ಮುಳುಗುತ್ತಿದ್ದ ದೃಶ್ಯ ಕಂಡ ಮೂವರು ಸ್ನೇಹಿತರು ಕೂಗಿಕೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ರಕ್ಷಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜಾವಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.