ಕೆಮ್ಮಿನ ಸಿರಪ್ ಕಂಪನಿ ಮಾಲೀಕನಿಗೆ ಕಠಿಣ ಶಿಕ್ಷೆಯಾಗಲಿ

IMG_20251010_184101
Published on

ಬಾಗೂರು: ಮಧ್ಯಪ್ರದೇಶದಲ್ಲಿ ವಿಷಯುಕ್ತ ರಾಸಾಯನಿಕ ಬೆರೆತಿರುವ ಕೋಲ್ಡ್‌ರಿಪ್ ಕೆಮ್ಮಿನ ಸಿರಪ್ ಸೇವಿಸಿ 22 ಮಕ್ಕಳ ಸಾವಿಗೆ ಕಾರಣವಾಗಿರುವ ಸ್ರೇಸನ್ ಫಾರ್ಮಾ ಕಂಪನಿಯ ಮಾಲೀಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.

ಹೋಬಳಿ ಕೇಂದ್ರದ ಸಂತೆಕಾಳೇಶ್ವರಿ ದೇಗುಲದ ಪಕ್ಕದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾರಾಷ್ಟ್ರ ಹಾಗೂ ನಾಗಪುರದ ಆಸ್ಪತ್ರೆಗಳಲ್ಲಿ 5 ವರ್ಷದ ಒಳಗಿನ ಮಕ್ಕಳು ಸಾವಿಗೆ ತುತ್ತಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಣ್ಣ ಮಕ್ಕಳ ಆರೋಗ್ಯದ ವಿಚಾರದಲ್ಲಿ ಮಕ್ಕಳ ತಜ್ಞ ವೈದ್ಯರ ಭೇಟಿ ಸಲಹೆ ಸೂಚನೆ ಮೇರೆಗೆ ಔಷಧ, ಮಾತ್ರೆಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಮಳೆಗಾಲದಲ್ಲಿ ನೀರನ್ನು ಕುದಿಸಿ ಆರಿಸಿ ಕುಡಿಯುವುದು ಉತ್ತಮ. ಸಾವಯವ ಕೃಷಿಯ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ತರಕಾರಿ ಬೆಳೆಗಳಿಗೂ ಔಷಧ ಸಿಂಪಡಣೆ ಮಾಡುತ್ತಾರೆ. ಮೆಣಸಿನಕಾಯಿಗೂ ಔಷಧ ಸಿಂಪಡಣೆ ಮಾಡುತ್ತಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಕೇಂದ್ರ ಸರ್ಕಾರ ಪೋಷಣ ಅಭಿಯಾನ ಯೋಜನೆಯಡಿ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಬಾಣಂತಿಯರು, ಕಿಶೋರಿಯರು ಹಾಗೂ 6 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಸೂಚನೆ ನೀಡಿದರು.

ಸಮಾರಂಭದಲ್ಲಿ ಡಾ.ವರದರಾಜ್, ಗ್ರಾಪಂ ಅಧ್ಯಕ್ಷ ಅಣ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ಮೇಲ್ವಿಚಾರಕಿ ಜಯಲಕ್ಷ್ಮಮ್ಮ, ಮುಖಂಡರಾದ ಮಂಜುನಾಥ್, ಮನು, ಚಂದ್ರಣ್ಣ, ಲಕ್ಷ್ಮಣ್, ಹರೀಶ್, ರಘು, ಧರಣೇಂದ್ರ, ಕಾಳೇಶ್, ಸಂಪತ್‌ಕುಮಾರ್, ಭಾಗ್ಯಮ್ಮ, ರಮ್ಯಾ, ರಾಧಾ, ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net