

ಕೆ.ಎಂ.ದೊಡ್ಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ಅವಧಿಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಓಂಶಾಂತಿ ರಸ್ತೆಯಲ್ಲಿನ ಸ್ವಾತಂತ್ರೃ ಹೋರಾಟಗಾರ ದಿವಂಗತ ನೀಲಕಂಠಯ್ಯ ಮನೆ ಪಕ್ಕದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕಟ್ಟಾಳು. ಉಪ ಮುಖ್ಯಮಂತ್ರಿಯಾಗಿ ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದಾಕ್ಷಣ ಅವರು ಬಿಜೆಪಿಗೆ ಹೋಗುವುದಿಲ್ಲ. ಇದರಲ್ಲಿ ಕೆಲವರು ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಿರುವುದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಮುಂದಿನ ಅವಧಿಗೂ ಅವರೇ ಮುಂದುವರಿದು ರಾಜ್ಯದಲ್ಲೆ ಮತ್ತೆ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಲಿದ್ದಾರೆ ಎಂದು ತಿಳಿಸಿದರು.
ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಮುಸ್ಲಿಮರು ಸೇರಿದಂತೆ ಇಲ್ಲಿ ವಾಸಿಸುತ್ತಿರುವ ಎಲ್ಲ ಜಾತಿಯ ಜನರು ಭಾರತೀಯರೆ. ಹೀಗಾಗಿ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಕನ್ನಡದ ಲೇಖಕಿಯಾಗಿ ಬಾನುಮುಷ್ತಾಕ್ ಬೂಕರ್ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸುವ ಕೆಲಸ ಮಾಡುತ್ತಿರುವುದರಿಂದ ದಸರಾ ಉದ್ಘಾಟಿಸಲು ಸರ್ಕಾರ ನಿರ್ಧಾರ ಮಾಡಿರುವುದು ಸರಿಯಾಗಿದೆ. ಆದರೆ, ಪ್ರತಿ ಬಾರಿಯೂ ವಿರೋಧ ಪಕ್ಷಗಳು ಆಡಳಿತ ಪಕ್ಷ ಏನೇ ಮಾಡಿದರೂ ಟೀಕೆ, ವಿರೋಧ ಮಾಡುವುದು ಸಹಜ ಎಂದು ಟೀಕಿಸಿದರು.
ನನ್ನ 3 ವರ್ಷದ ವಿಧಾನ ಪರಿಷತ್ ಸದಸ್ಯ ಸ್ಥಾನದ ಅವಧಿಯಲ್ಲಿ ಇದುವರೆಗೆ 6 ಕೋಟಿ ರೂ.ಅನುದಾನ ತಂದಿದ್ದೇನೆ. ಇನ್ನೂ 3 ವರ್ಷಗಳ ಅವಧಿ ಇದೆ. ಹಾಗಾಗಿ ಇನ್ನಷ್ಟು ಅನುದಾನ ತಂದು ಮದ್ದೂರು ಕ್ಷೇತ್ರ ಸೇರಿದಂತೆ ನನ್ನ ವ್ಯಾಪ್ತಿಯ ದಕ್ಷೀಣ ಪದವೀಧರ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಸೌಭಾಗ್ಯ ರಾಮಣ್ಣ, ಮಾಜಿ ಅಧ್ಯಕ್ಷ ಚಿಕ್ಕವೆಂಕಟೇಗೌಡ, ಪಿಡಿಒ ಸುಧಾ, ಸದಸ್ಯರಾದ ಕೆ.ಟಿ. ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ಕುಳ್ಳಪ್ಪ, ಭಾರತಿ, ಮುಖಂಡರಾದ ಹಾಗಲಹಳ್ಳಿ ಪುಟ್ಟಸ್ವಾಮಿ, ಕೆ.ಕಬ್ಬಾಳಯ್ಯ, ಸಿಮೆಂಟ್ ವೆಂಕಟೇಶ್, ಕೆಂಚಸ್ವಾಮಿ, ಜಗದೀಶ್, ಗೊಪ್ಪೆಸ್ವಾಮಿ ಮತ್ತಿತರಿದ್ದರು.