

ಶಿರಸಿ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿದ್ದ ಬಹುತೇಕ ನಿರ್ದೇಶಕರು ಹೊಸಬರೆದುರು ನೆಲಕಚ್ಚಿದ್ದಾರೆ.
ಆಡಳಿತ ಮಂಡಳಿಯ ಒಟ್ಟು 16 ನಿರ್ದೇಶಕ ಸ್ಥಾನಗಳಲ್ಲಿ 6 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಈ ಹಿಂದಿನ ನಿರ್ದೇಶಕರಾದ ಜಿ.ಆರ್. ಹೆಗಡೆ ಸೋಂದಾ, ಶಿವಾನಂದ ಹೆಗಡೆ ಕಡತೋಕ, ಷಣ್ಮುಖ ಗೌಡ, ಮೋಹನದಾಸ ನಾಯಕ ಆಯ್ಕೆಯಾಗಿದ್ದರೆ, ಹೊಸಬರಾದ ರಾಮಕೃಷ್ಣ ಹೆಗಡೆ ಕಡವೆ, ಗಜು ಪೈ, ಬೀರಣ್ಣ ನಾಯಕ, ಎಲ್.ಟಿ. ಪಾಟೀಲ, ಸುರೇಶ್ಚಂದ್ರ ಹೆಗಡೆ, ವಿಶ್ವನಾಥ ಭಟ್ಟ ಹೊಸದಾಗಿ ಗೆಲುವು ಸಾಧಿಸಿದ್ದಾರೆ.
ವಿಜೇತರು: ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ರಾಮಕೃಷ್ಣ ಕಡವೆ ಅವರು ಜಿ.ಆರ್. ಹೆಗಡೆ ವಿರುದ್ಧ 15- 12 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ ಎಲ್.ಟಿ. ಪಾಟೀಲ ಅವರು ರವಿಚಂದ್ರ ದುಗ್ಗಳ್ಳಿ ವಿರುದ್ಧ 11-3 ಮತಗಳ ಅಂತರದಿಂದ ಗೆದ್ದಿದ್ದಾರೆ. ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಗಜಾನನ ಪೈ ಅವರು ಶ್ರೀಧರ ಭಾಗವತ ವಿರುದ್ಧ 10- 5 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಂಕೋಲಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಬೀರಣ್ಣ ನಾಯಕ ಪ್ರತಿಸ್ಪರ್ಧಿ ವಿಜಯಕುಮಾರ ಎದುರು 7-6 ಮತಗಳ ಅಂತರದಿಂದ ವಿಜಯದ ಪತಾಕೆ ಹಾರಿಸಿದರು.
ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಿವಾನಂದ ಹೆಗಡೆ ಕಡತೋಕ ಅವರು ಮಹಾಬಲೇಶ್ವರ ಹೆಗಡೆ ವಿರುದ್ಧ 13-8 ಮತಗಳ ಅಂತರದಿಂದ ಗೆದ್ದಿದ್ದಾರೆ.
ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ.ಆರ್. ಹೆಗಡೆ ಸೋಂದಾ ಅವರು ಹತ್ತಿರದ ಪ್ರತಿಸ್ಪರ್ಧಿ ಚಂದ್ರು ದೇವಾಡಿಗ ವಿರುದ್ಧ 18-12 ಮತಗಳ ಅಂತರದಿಂದ ವಿಜಯಶಾಲಿಯಾದರು.
ಔದ್ಯೋಗಿಕ ಸಹಕಾರಿ ಸಂಘಗಳ (ನೇಕಾರರ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ವಿಶ್ವನಾಥ ಭಟ್ಟ ಹೊನ್ನಾವರ ಅವರು ಜಿ.ಟಿ. ಹೆಗಡೆ ವಿರುದ್ಧ 13-11 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮೋಹನದಾಸ ನಾಯಕ ಹತ್ತಿರದ ಪ್ರತಿಸ್ಪರ್ಧಿ ವಸಂತ ನಾಯಕ ವಿರುದ್ಧ 75-52 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಹಾಲು ಉತ್ಪಾದಕರ/ ಕಾರ್ವಿುಕರ/ ಕೂಲಿಕಾರರ/ ಇತರ ಸಹಕಾರಿ ಸಂಘಗಳ (ಫಾರ್ವಿುಂಗ್ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಿಂದ ಸುರೇಶ್ಚಂದ್ರ ಕೆಶಿನ್ಮನೆ ಅವರು ಭಾಸ್ಕರ ಹೆಗಡೆ ವಿರುದ್ಧ 65-35 ಮತಗಳ ಭಾರಿ ಅಂತರದಲ್ಲಿ ವಿಜಯಿಯಾದರು.
ಅವಿರೋಧ ಆಯ್ಕ: ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಪ್ರಕಾಶ ಗುನಗಿ, ಯಲ್ಲಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸಚಿವ ಶಿವರಾಮ ಹೆಬ್ಬಾರ, ಹಳಿಯಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಎಸ್.ಎಲ್. ಘೊಟ್ನೇಕರ, ಭಟ್ಕಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಮಂಕಾಳು ವೈದ್ಯ, ಜೊಯಿಡಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕೃಷ್ಣ ದೇಸಾಯಿ, ತಾಲೂಕು ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಆರ್.ಎಂ. ಹೆಗಡೆ ಸಿದ್ದಾಪುರ ಅವರು ಈ ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಾಟರಿಯಲ್ಲಿ ಗೆಲುವು: ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಶಣ್ಮುಖ ಗೌಡ ಹಾಗೂ ವಿವೇಕ ಭಟ್ಟ ಗಡಿಹಿತ್ಲು ಇವರಿಬ್ಬರೂ ತಲಾ 12 ಮತಗಳನ್ನು ಪಡೆದರು. ಈ ಹಿನ್ನೆಲೆಯಲ್ಲಿ ಚೀಟಿ ಆರಿಸಿದಾಗ ಷಣ್ಮುಖ ಗೌಡ ಗೆದ್ದಿದ್ದಾರೆ.
ತುರುಸು: ಚುನಾವಣೆಯಲ್ಲಿ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೂ ಹೆಚ್ಚಿನ ತುರುಸು ಕಂಡು ಬಂದಿತು. ಅಭ್ಯರ್ಥಿಗಳು ವಿಜೇತರ ಘೊಷಣೆವರೆಗೂ ಒತ್ತಡದಲ್ಲಿದ್ದಿದ್ದು ಕಂಡುಬಂದರೆ, ಅವರ ಹಿಂಬಾಲಕರು, ಸಹಕಾರಿ ಪ್ರಮುಖರು ಕುತೂಹಲದಲ್ಲಿದ್ದರು. ಬಹುತೇಕರು ಬೆಳಗ್ಗೆಯಿಂದ ಸಂಜೆಯವರೆಗೆ ಬ್ಯಾಂಕಿನ ಹೊರಗೆ ಕಾಯುತ್ತಿದ್ದರು. ಪರಸ್ಪರ ಅಂತರ, ಸ್ಯಾನಿಟೈಸರ್, ಕಡ್ಡಾಯ ಮಾಸ್ಕ್ ಬಳಕೆಯೊಂದಿಗೆ ಚುನಾವಣೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ ಮತದಾನ ವೇಳೆ ಬ್ಯಾಂಕ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಘಟಾನುಘಟಿಗಳಿಗೆ ಸೋಲು!: ಸಹಕಾರಿ ರತ್ನ ಪುರಸ್ಕೃತ, ಬ್ಯಾಂಕ್ನ ಮಾಜಿ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, 2 ಬಾರಿ ನಿರ್ದೇಶಕರಾಗಿದ್ದ ಶ್ರೀಧರ ಭಾಗ್ವತ್, 3 ಬಾರಿ ಉಪಾಧ್ಯಕ್ಷರಾಗಿ 6 ಬಾರಿ ನಿರ್ದೇಶಕರಾಗಿದ್ದ ಭಾಸ್ಕರ ಹೆಗಡೆ ಕಾಗೇರಿ, ನಿಕಟಪೂರ್ವ ನಿರ್ದೇಶಕ ವಿಜಯಕುಮಾರ ನಾಯಕ ಅವರಂಥ ಘಟಾನುಘಟಿಗಳು ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.
3 ತಾಸು ವಿಳಂಬ: ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ನಡೆಸಲು ಅನುಮತಿ ಇದ್ದರೂ, ನ್ಯಾಯಾಲಯದಿಂದ ಅನುಮತಿ ಪಡೆದ ಮತಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಿಂದ ಮತದಾನ ತೀವ್ರ ವಿಳಂಬವಾಯಿತು. 3 ತಾಸಿಗೂ ಅಧಿಕ ಕಾಲ ಮತದಾನ ಹೆಚ್ಚುವರಿಯಾಗಿ ನಡೆಯಿತು. ನ್ಯಾಯಾಲಯದಿಂದ ಬಂದ ಮತಗಳನ್ನು ಪರಿಶೀಲಿಸಿ, ಚುನಾವಣಾಧಿಕಾರಿ ಘೊಷಿಸಿದ ನಂತರ ಮತದಾನ ಮಾಡಲು ಅನುಮತಿ ನೀಡಲಾಯಿತು.