

ನಾಗಮಂಗಲ: ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುವಾಗ ತಮ್ಮ ಇಲಾಖೆಗಳ ಒಟ್ಟು ಸಿಬ್ಬಂದಿ ಪೈಕಿ ಶೇ.50ಕ್ಕಿಂತ ಹೆಚ್ಚು ಕೊರತೆ ಇದೆ ಎಂಬ ಮಾತು ಕೇಳಿಬಂದದ್ದು ಆಡಳಿತಾಧಿಕಾರಿಗಳ ಆಶ್ಚರ್ಯಕ್ಕೆ ಕಾರಣವಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಡಳಿತಾಧಿಕಾರಿ ಧನಂಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದಾಗಿ ಹೇಳಿ ಅಸಹಾಯಕತೆ ತೋರ್ಪಡಿಸಿದ್ದು ಮಾತ್ರವಲ್ಲದೆ, ತಮಗಿರುವ ಕಾರ್ಯದೊತ್ತಡವನ್ನು ಹೇಳಿದರು.
ಪಶುಸಂಗೋಪನೆ ಇಲಾಖೆಯಲ್ಲಿ ಒಟ್ಟು 16 ಪಶುವೈದ್ಯರಿಗೆ ಕೇವಲ 4 ಜನರಿದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಇಲಾಖೆಯ ಒಟ್ಟು 101 ಸಿಬ್ಬಂದಿ ಪೈಕಿ 26 ಜನ ಮಾತ್ರ ಇದ್ದು, 75 ಖಾಲಿ ಹುದ್ದೆಗಳಿವೆ. 26 ಆಸ್ಪತ್ರೆಗಳ ಪೈಕಿ 11ರಲ್ಲಿ ಒಬ್ಬ ಸಿಬ್ಬಂದಿಯೂ ಇಲ್ಲದಂತಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.
ಸೆಸ್ಕ್ ಎಇಇ ಮರಿಸ್ವಾಮಿ ಮಾತನಾಡಿ, ತಮ್ಮ ಇಲಾಖೆಯಲ್ಲಿ ಒಟ್ಟು 260 ಸಿಬ್ಬಂದಿಗೆ 155 ಜನರಿದ್ದು, 105 ಹುದ್ದೆಗಳು ಖಾಲಿಯಿವೆ. ಈ ಪೈಕಿ ಪ್ರಮುಖವಾಗಿ 8 ಇಂಜಿನಿಯರ್ ಹುದ್ದೆ ಖಾಲಿಯಿದ್ದು, ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ತಮ್ಮ ಇಲಾಖೆಯಲ್ಲಿ ಬಿಳಗುಂದ ಮತ್ತು ಕೆಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ಇನ್ನು ತಾಲೂಕಿನಲ್ಲಿ ಶೇ.60 ರಷ್ಟು ಪ್ಯಾರಮೆಡಿಕಲ್ ಸಿಬ್ಬಂದಿ ಹುದ್ದೆ ಖಾಲಿಯಿರುವುದಾಗಿ ತಿಳಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಸಹಾಯಕ ನಿರ್ದೇಶಕ ಡಾ.ಜಯರಾಮ್ ಮಾಹಿತಿ ನೀಡಿ, ತಾಲೂಕಿನಲ್ಲಿ ಒಟ್ಟು 9 ಕೃಷಿ ಅಧಿಕಾರಿಗಳ ಪೈಕಿ 6 ಹುದ್ದೆ ಖಾಲಿಯಿವೆ. ಒಟ್ಟು 10 ಸಹಾಯಕ ಕೃಷಿ ಅಧಿಕಾರಿಗಳ ಪೈಕಿ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, 9 ಹುದ್ದೆ ಖಾಲಿಯಿವೆ. ಒಟ್ಟಾರೆ ಕೃಷಿ ಇಲಾಖೆಯಲ್ಲಿ 20 ಹುದ್ದೆಗಳು ಖಾಲಿಯಿರುವುದಾಗಿ ತಿಳಿಸಿದರು.
ಇನ್ನು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಲ್ಲಿ 66 ಸಿಬ್ಬಂದಿ ಖಾಲಿ ಇರುವುದಾಗಿ ತಿಳಿಸಿದರು. ಇದೇ ರೀತಿ ಪ್ರತಿಯೊಂದು ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಹಾಗೂ ಕೆಲಸದೊತ್ತಡ ಹೆಚ್ಚಾಗಿದ್ದು, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಕಷ್ಟಕರವಾಗುತ್ತಿದೆ. ಇರುವಷ್ಟು ಸಿಬ್ಬಂದಿ ಮೂಲಕವೇ ಕೆಲಸ ಮಾಡಿಸಲಾಗುತ್ತಿದೆ ಎಂದು ತಮ್ಮ ಅಸಾಯಕತೆಯನ್ನು ಅಧಿಕಾರಿಗಳು ಸಭೆಯಲ್ಲಿ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾ.ಪಂ.ಇಒ ಚಂದ್ರಮೌಳಿ, ಲೆಕ್ಕಾಧಿಕಾರಿ ಕೋಮಲ, ತೋಟಗಾರಿಕೆ ಸಹಾಯಕ ನಿರ್ದೇಶಕ ರಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯರಾಮ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಸಾಮಾಜಿಕ ಅರಣ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಮತ್ತಿತರಿದ್ದರು.
ಲಕ್ಷಗಟ್ಟಲೆ ಬಿಲ್ ಪಾವತಿಸದ ಗ್ರಾ.ಪಂ.ಗಳು!
ಸಭೆಯಲ್ಲಿ ಸೆಸ್ಕ್ ಎಇಇ ಮರಿಸ್ವಾಮಿ ಮಾತನಾಡಿ, ಕಳೆದ 3 ತಿಂಗಳಿನಿಂದ 10 ಲಕ್ಷಕ್ಕೂ ಅಧಿಕ ಮೊತ್ತದ ಸೆಸ್ಕ್ ಬಿಲ್ ಅನ್ನು ನಾಗಮಂಗಲ ಹಾಗೂ ಬೆಳ್ಳೂರು ವಿಭಾಗಕ್ಕೆ ಸೇರಿದ 4 ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಬಿಲ್ ಪಾವತಿಸದಿದ್ದರೆ ಗ್ರಾಮ ಪಂಚಾಯಿತಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ. ಬೆಳ್ಳೂರು ಉಪವಿಭಾಗದ ಹುಲಿಕೆರೆ, ಚುಂಚನಹಳ್ಳಿ, ಕಾಳಿಂಗನಹಳ್ಳಿ ಹಾಗೂ ನಾಗಮಂಗಲ ಉಪವಿಭಾಗದ ಪಾಲಗ್ರಹಾರ ಗ್ರಾಮ ಪಂಚಾಯಿತಿಗಳು ತಲಾ 10 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಬಿಲ್ ಪಾವತಿಸುವಂತೆ ಅನೇಕ ಬಾರಿ ತಿಳಿಸಿದರೂ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದರು.
ವಿಶೇಷ ತಂಡ ರಚಿಸಿ ತನಿಖೆ: ಕಳೆದ 3 ತಿಂಗಳಿಂದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ 4 ಗ್ರಾಮ ಪಂಚಾಯಿತಿಗಳ ಮೇಲೆ ವಿಶೇಷ ತಂಡ ರಚಿಸಿ ಬಿಲ್ ಪಾವತಿಸಲು ಕಾರಣವೇನು? ಹಾಗೂ ಇಷ್ಟು ದೊಡ್ಡ ಮಟ್ಟದ ಬಿಲ್ ಬಾಕಿ ಯಾವ ಕಾರಣಕ್ಕೆ ಉಳಿಸಿಕೊಂಡಿದ್ದಾರೆ? ಬಿಲ್ ಪಾವತಿಸದೆ ನಿರ್ಲಕ್ಷ್ಯವಹಿಸಿರುವುದು ಏಕೆ ಎಂಬುದನ್ನು 4 ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ಕುರಿತಾಗಿ ತಿಳಿಯಲು ಒಂದು ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಇಒ ಚಂದ್ರಮೌಳಿ ಅವರಿಗೆ ಆಡಳಿತಾಧಿಕಾರಿ ಧನಂಜಯ ಸೂಚಿಸಿದರು.
ಪ್ರಾಥಮಿಕ, ಪ್ರೌಢಶಾಲೆಯಲ್ಲಿ 290 ಶಿಕ್ಷಕರ ಕೊರತೆ
ಬಿಇಒ ಸುರೇಶ್ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿದೆ. ಪ್ರಮುಖವಾಗಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಅತಿಥಿ ಶಿಕ್ಷಕರು ಸಿಗುತ್ತಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 237 ಶಿಕ್ಷಕರ ಕೊರತೆಯಿದ್ದು, ಪ್ರೌಢಶಾಲೆಯಲ್ಲಿ 53 ಶಿಕ್ಷಕರ ಕೊರತೆಯಿದೆ. ತಾಲೂಕಿನಲ್ಲಿ ಕೆಲವು ಶಾಲೆಗಳು ಮಳೆಗಾಲದಲ್ಲಿ ಸೋರುತ್ತಿದ್ದು, ಅವುಗಳ ದುರಸ್ತಿಯಾಗಬೇಕಿದೆ. ಕೆಲವು ಶಾಲೆಗಳಿಗೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು, ನಿರ್ಮಿತಿ ಕೇಂದ್ರಕ್ಕೆ ಕೆಲವು ಕಾಮಗಾರಿಗಳನ್ನು ನೀಡಲಾಗಿದೆ. ಆದರೆ ನಿರ್ಮಿತಿ ಕೇಂದ್ರದವರು 10 ತಿಂಗಳಾದರೂ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ ಎಂದರು.