

ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಡಿಪೋದಲ್ಲಿ ಬಸ್‌ಗಳ ನಿರ್ವಹಣೆ ಮಾಡದ ಪರಿಣಾಮ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದು ನೆಮ್ಮದಿ ಕೆಡಿಸುತ್ತಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಎಲ್ಲ ಬಸ್‌ಗಳಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಪಟ್ಟಣದ ಸಾರಿಗೆ ಘಟಕದಲ್ಲಿ ಬಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಬಹುತೇಕ ಬಸ್‌ಗಳು ಗುಜರಿ ಗಾಡಿಗಳಾಗಿದ್ದು ಪ್ರತಿ ದಿನವೂ ಒಂದಲ್ಲಾ ಒಂದು ಕಡೆಗಳಲ್ಲಿ ಕೆಟ್ಟು ನಿಲ್ಲುತ್ತಿವೆ. ನಿಲ್ದಾಣದಿಂದ ಹೊರಟ ಬಸ್ ಎಲ್ಲಿ ನಿಲ್ಲುತ್ತದೆ ಎಂಬುದನ್ನೇ ಅರಿಯದ ಪ್ರಯಾಣಿಕರು ತಾವು ಎಷ್ಟು ಹೊತ್ತಿಗೆ ಮನೆಗೆ ಹೋಗುತ್ತೇವೋ ಎಂಬ ಆತಂಕದಿಂದಲೇ ಪ್ರಯಾಣಿಸುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆಯರು ಮಕ್ಕಳಿಗೆ ತೊಂದರೆ: ಶನಿವಾರ ರಾತ್ರಿ ಮೈಸೂರಿನಿಂದ ಪಟ್ಟಣಕ್ಕೆ ಬರುತ್ತಿದ್ದ ಬಸ್ ನಂಜನಗೂಡು ಸಮೀಪ ಕೆಟ್ಟುನಿಂತ ಪರಿಣಾಮ ಮಹಿಳೆಯರು, ಮಕ್ಕಳು, ವೃದ್ಧರು ಬೇರೆ ಬಸ್‌ಗಳಿಗಾಗಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಕಾದು ನಿಲ್ಲುವಂತಾಗಿತ್ತು. ಎಲ್ಲ ಬಸ್‌ಗಳಲ್ಲಿಯೂ ಪ್ರಯಾಣಿಕರನ್ನು ತುಂಬಿಕೊಂಡಿದ್ದರಿಂದ ಅಲ್ಲಿ ನಿಲ್ಲಿಸದೆ ಹೋಗುತ್ತಿದ್ದವು. ಗ್ರಾಮಾಂತರ ಪ್ರದೇಶಗಳ ಜನರು ತಮ್ಮ ಊರುಗಳಿಗೆ ಹೋಗುವ ಬಸ್‌ಗಳು ಸಿಕ್ಕದಿದ್ದರೆ ತುಂಬಾ ತೊಂದರೆಯಾಗುತ್ತದೆ ಎಂದು ಆತಂಕಕ್ಕೊಳಗಾದ ಜನರು ಬಸ್ ಕೆಟ್ಟಿರುವ ಬಗ್ಗೆ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ದುರಹಂಕಾರದಿಂದ ಉತ್ತರಿಸಿದ್ದು, ಪ್ರಯಾಣಿಕರನ್ನು ಕೆರಳುವಂತೆ ಮಾಡಿತ್ತು. ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಅವರ ಗಮನಕ್ಕೆ ತಂದ ನಂತರ ಬೇರೆ ಬಸ್ ಕಳಿಸಿದರು ಎಂದು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ವಹಣೆ ಕೊರತೆ, ಬಿಡಿಭಾಗಗಳ ಖರೀದಿಯಿಲ್ಲ: ಡಿಪೋದಲ್ಲಿ 10 ಕಾಯಂ ಫೋರ್‌ಮನ್‌ಗಳು ಇದ್ದರೆ ಅನುಭವವಿಲ್ಲದ 40 ಹೊಸಬರನ್ನು ಹೊರಗುತ್ತಿಗೆ ಆಧಾರದಲ್ಲಿ ನಿಯೋಜಿಸಿಕೊಳ್ಳಲಾಗಿದ್ದರೂ ನುರಿತ ಫೋರ್‌ಮನ್‌ಗಳ ಕೊರತೆಯಿಂದ ಬಸ್‌ಗಳ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಅಲ್ಲದೆ ಹಿಂದಿನಂತೆ ಚಾಲಕರಿಗೆ ಬಸ್‌ಗಳನ್ನು ಅಲಾಟ್ ಮಾಡುತ್ತಿಲ್ಲ. ಇದರಿಂದ ಡ್ಯೂಟಿ ಮುಗಿಸಿ ಬಂದ ಚಾಲಕರು ಬಸ್‌ಗಳ ಸಮಸ್ಯೆಗಳ ಬಗ್ಗೆ ತಿಳಿಸಿದರೂ ಅವುಗಳನ್ನು ರಿಪೇರಿ ಮಾಡದೆ ಕರ್ತವ್ಯಕ್ಕೆ ಹಾಜರಾಗುವ ಬೇರೆ ಚಾಲಕರಿಗೆ ಕೊಟ್ಟು ಕಳಿಸುತ್ತಿದ್ದಾರೆ. ಕಡಿಮೆ ವೆಚ್ಚ ತೋರಿಸಿ ಹೆಚ್ಚಿನ ಆದಾಯ ಗಳಿಸುವ ಸಲುವಾಗಿ ಬಿಡಿ ಭಾಗಗಳನ್ನು ತರಿಸಿ ಅಳವಡಿಸುತ್ತಿಲ್ಲ. ಎಲ್ಲ ಬಸ್‌ಗಳಿಗೂ ಏರ್‌ಫಿಲ್ಟರ್, ಬ್ರೇಕ್ ಲೈನರ್, ಡ್ರಂ ಸಮಸ್ಯೆ ಇದ್ದರೂ ಇವುಗಳನ್ನು ರಿಪೇರಿ ಮಾಡಿಸದೆ ಹಾಗೆಯೇ ಲೈನಿಗೆ ಕಳಿಸಲಾಗುತ್ತಿದೆ. ಹಲವು ಬಸ್‌ಗಳಿಗೆ ಸೆಲ್ಫ್ ಮೋಟಾರು ಸಮಸ್ಯೆಯಿದ್ದು ಇಂಜಿನ್ ಆಫ್ ಆದರೆ ಪ್ರಯಾಣಿಕರನ್ನು ಕೆಳಗಿಳಿಸಿ ನೂಕಿದರೆ ಮಾತ್ರ ಸ್ಟಾರ್ಟ್ ಆಗುತ್ತಿವೆ. ಟಯರ್‌ಗಳು ಸಂಪೂರ್ಣ ಸವೆದಿದ್ದರೂ ಅವುಗಳನ್ನು ಬದಲಿಸದೆ ರೂಟಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಜ.6ರಂದು ಹೊರನಾಡಿಗೆ ಹೋಗುತ್ತಿದ್ದ ಪಟ್ಟಣದ ಸಾರಿಗೆ ಬಸ್ ಹಾಸನದ ಬಳಿ ಮುಂದಿನ ಚಕ್ರ ಕಳಚಿ ಅಪಘಾತಕ್ಕೊಳಗಾಗಿದೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಸದಾಕಾಲ ಓಡಾಡುವ ಬಸ್‌ಗಳು ಆಗಾಗ ಕೆಟ್ಟು ನಿಲ್ಲುವುದು ಸಹಜವಾಗಿದೆ. ಇಂಥಾ ಸಂದರ್ಭದಲ್ಲಿ ಡಿಪೋದಿಂದ ಬೇರೆ ಬಸ್ಸು ಕಳುಹಿಸಿದರೂ ಅಲ್ಲಿಗೆ ತಲುಪಲು ಒಂದು ಗಂಟೆ ಕಾಲಾವಕಾಶ ಬೇಕಾಗುತ್ತದೆ. ನಿರ್ವಹಣೆಯಲ್ಲಿ ಗುಂಡ್ಲುಪೇಟೆ ಡಿಪೋ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ತ್ಯಾಗರಾಜು, ಗುಂಡ್ಲುಪೇಟೆ ಡಿಪೋ ಮ್ಯಾನೇಜರ್