

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಾಹನಕ್ಕೆ ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಮೊಟ್ಟೆ ಹೊಡೆದ ಘಟನೆ ಖಂಡಿಸಿ ಬಾಗಲಕೋಟೆ ವಿಧಾನಸಭಾ ಮತಕಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಆರ್ ಎಸ್ ಎಸ್ ವಿರುದ್ಧ ಧರಣಿ ನಡೆಸಿದರು. ಅಲ್ಲದೆ ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದೆ. ಕಾರ್ಯಕರ್ತರನ್ನು ಎತ್ತಿಕಟ್ಟಿ ವಿರೋಧ ಪಕ್ಷದ ನಾಯಕರನ್ನು ಅವಮಾನಿಸಲಾಗುತ್ತಿದೆ. ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಕಾರ ಮೇಲೆ ಮೊಟ್ಟೆ ಎಸೆದಿದ್ದು ಖಂಡನೀಯ. ಸಿದ್ದರಾಮಯ್ಯಗೆ ಅವಹೇಳನ ಹಾಗೂ ಕಟ್ಟ ಪದ ಬಳಕೆ ಮಾಡುವುದು ಸರಿಯಲ್ಲ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ ಮಾಡಲು ನೈತಿಕತೆ ಇಲ್ಲ. ಸಿದ್ದರಾಮಯ್ಯ ನಾಡಿನ ಹಿಂದುಳಿದ ವರ್ಗಗಳ ನಾಯಕ. ಅರ್ಥಮಾಡಿಕೊಂಡು ಮಾತನಾಡಬೇಕು ಬಿಜೆಪಿ ನಾಯಕರು. ಈ ರೀತಿ ಘಟನೆ ಮುಂದುವರೆದಿಲ್ಲ. ಪ್ರತಿ ಹಳ್ಳಿ, ನಗರಗಳಲ್ಲಿ ಬಿಜೆಪಿ ಸರ್ಕಾರದ ಸಚಿವರ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಲಿದೆ. ನಮಗೂ ಶಕ್ತಿ ಇದೆ ಎನ್ನುವುದು ಮರೆಯಬಾರದು. ಬಿಜೆಪಿಯವರು ಕೆಟ್ಟ ಸಂಸ್ಕೃತಿಯ ರಾಜಕಾರಣ ಬಿಟ್ಟು ಬಿಡಿ ಅಂತ ಎಚ್ಚರಿಕೆ ನೀಡಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಮಾತನಾಡಿ, ಸಿದ್ದರಾಮಯ್ಯ ಜನ ಸಾಮಾನ್ಯರ ಶಕ್ತಿ. ಅವರಿಗೆ ಕಪ್ಪು ಭಾವುಟ ಪ್ರದರ್ಶನ, ಕಾರಿಗೆ ಮೊಟ್ಟೆ ಹೊಡೆಯುವುದು ಸರಿಯಲ್ಲ. ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡುತ್ತಿಲ್ಲ. ಮೋದಿ, ಅಮಿತ್ ಷಾ, ಸ್ಮೃತಿ ಇರಾನಿ ಅವರಿಗೆ ಇದೇ ರೀತಿ ಮಾಡಿದರೇ ನೀವು ಸುಮ್ಮನೆ ಇರುತ್ತೀರಾ ಅಂತ ಕಿಡಿಕಾಡಿದರು.
ಪೊಲೀಸರೊಂದಿಗೆ ವಾಗ್ವಾದ:
ಪ್ರತಿಭಟನೆ ವೇಳೆ ಟೈಯರ್ಗೆ ಬೆಂಕಿ ಹಚ್ಚಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದರು. ಇದಕ್ಕೆ ಪೊಲೀಸರು ಪ್ರತಿರೋಧ ಒಡ್ಡಿದರು. ಈ ವೇಳೆ ಪೊಲೀಸರು, ಕಾಂಗ್ರೆಸ್ ಮುಖಂಡರ ನಡುವೆ ವಾಗ್ದಾದ ನಡೆಯಿತು. ರಸ್ತೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಪೊಲೀಸರು ನೀರು ಹಾಕಿ ಬೆಂಕಿ ನಂದಿಸಿದರು. ರಾಜ್ಯದಲ್ಲಿ ಪೊಲೀಸರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದರು. ಕೊನೆಗೆ ಕಾರ್ಯಕರ್ತರನ್ನು ಸಮಾಧನ ಪಡಿಸಲಾಯಿತು. ಮುಖಂಡರಾದ ಆನಂದ ಜಿಗಜಿನ್ನಿ, ರಾಜು ಮನ್ನಿಕೇರಿ, ಎಸ್.ಎನ್.ರಾಂಪೂರ, ನಾಗರಾಜ ಹದ್ಲಿ, ಚನ್ನವೀರ ಅಂಗಡಿ, ಮುತ್ತು ಜೋಳದ, ರೇಣುಕಾ ನ್ಯಾಮಗೌಡ, ಚಂದ್ರಶೇಖರ ರಾಠೋಡ, ಜಯಶ್ರೀ ಗೋಳಬಾಳ, ಹಣುಮವ್ವ ಕರಿಹೊಳಿ ಸೇರಿದಂತೆ ಇತರರು ಇದ್ದರು.