ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾರ್ಗದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

26 vpt. 2.1
Published on

ವಿರಾಜಪೇಟೆ: ವಿರಾಜಪೇಟೆ ಮುಖ್ಯರಸ್ತೆಯ ಗಡಿಯಾರ ಕಂಬದ ಬಳಿಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಈ ಮಾರ್ಗದಲ್ಲಿ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಇಲ್ಲಿ ಗಿಡಗಂಟಿಗಳು ಬೆಳೆದು ನಿಂತ ಕಾರಣ ಕೆಲವರು ಇಲ್ಲಿ ಧೂಮಪಾನ ಹಾಗೂ ಮದ್ಯ ಸೇವನೆ ಮಾಡುವುದರೊಂದಿಗೆ ಮೂತ್ರ ವಿಸರ್ಜನೆ ಮಾಡಿ ಪಾದಚಾರಿಗಳಿಗೆ ಮುಜುಗರ ಉಂಟು ಮಾಡುತ್ತಿದ್ದರು.

ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಹಲವು ಬಾರಿ ಇದನ್ನು ಸರಿ ಪಡಿಸಲು ಪ್ರಯತ್ನ ಮಾಡಿದ್ದರೂ ಕೆಲವು ದಿನದ ಬಳಿಕ ಸಮಸ್ಯೆ ಮತ್ತೆ ಆರಂಭವಾಗುತ್ತಿತ್ತು. ಇದೀಗ ಪುರಸಭೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರು ಸದಸ್ಯರೊಂದಿಗೆ ಚರ್ಚಿಸಿ ಸಿಸಿ ಕ್ಯಾಮರಾ ಆಳವಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದ ಕಾಲುದಾರಿಯಲ್ಲಿ ನಡೆಯುವ ಪ್ರತಿ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತದೆ. ಇನ್ನು ಮುಂದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಸಂಚರಿಸಬಹುದಾಗಿದೆ. ಪುರಸಭೆಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಸುವ ಸ್ಥಳಕ್ಕೆ ಭೇಟಿ ನೀಡಿದ್ದ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನಗಳ ವಿರೋಧ ದಿನದಂದೇ ಪುರಸಭೆ ವತಿಯಿಂದ ಹಲವಾರು ವರ್ಷಗಳಿಂದ ಸಮಸ್ಯೆಯಾಗುತ್ತಿದ್ದ ಕಾಲುದಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಅಕ್ರಮ ಚಟುವಟಿಕೆ ನಡೆಯುವುದನ್ನು ಧ್ವನಿ ಸಮೇತ ಸೆರೆ ಹಿಡಿಯಲಾಗುತ್ತದೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಇದರ ನಿರ್ವಹಣೆ ಮಾಡುತ್ತಾರೆ ಎಂದು ತಿಳಿಸಿದರು.

ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ, ಪುರಸಭೆಯ ಆರೋಗ್ಯ ಅಧಿಕಾರಿ ಕೋಮಲಾ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net