ಕೆಂಪೇಗೌಡ ಜಯಂತಿ ಸರಳ ಆಚರಣೆ

Published on

ಪೂರ್ವಭಾವಿ ಸಭೆಯಲ್ಲಿ ತೀರ್ಮಾನ | ಶಾಸಕರು, ಒಕ್ಕಲಿಗ ಮುಖಂಡರ ಚರ್ಚೆ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಜೂ.27ರಂದು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಅಚರಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಒಕ್ಕಲಿಗರ ಸಂಘ ಅಯೋಜಿಸಿದ್ದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೆಂಪೇಗೌಡ ಜಯಂತಿಯ ಆದ್ದೂರಿ ಆಚರಣೆಗೆ ಎಲ್ಲ ಸಹಕಾರ ನೀಡಲು ಸಿದ್ಧ. ತಾಲೂಕು ಆಡಳಿತದ ಸಹಕಾರವೂ ಇರುತ್ತೆ. ಆದರೆ, ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಮಟ್ಟದಿಂದ ಸಮುದಾಯದವರನ್ನು ಕರೆತರುವ ಕೆಲಸ ನಡೆಯಬೇಕಾಗಿದ್ದು, ಸಂಘದ ಮುಖಂಡರು ಈ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಒಕ್ಕಲಿಗರ ಸಂಘದ ಮುಖಂಡರು, ಚೇಳೂರು ಹೋಬಳಿ ಪ್ರತ್ಯೇಕ ತಾಲೂಕಾಗಿದ್ದು ಚೇಳೂರು ತಾಲೂಕು ಒಕ್ಕಲಿಗರು ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಮುಂಗಾರು ಆರಂಭವಾಗಿರುವ ಹಿನ್ನಲೆಯಲ್ಲಿ ಬಹುತೇಕರು ಬಿತ್ತನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ಜನರನ್ನು ಕರೆತರುವುದು ಕಷ್ಟವಾಗುತ್ತದೆ ತಿಳಿಸಿದರು. ಇದಕ್ಕೆ ಸಭೆಯಲ್ಲಿದ್ದವರು ಸಹಮತ ವ್ಯಕ್ತಪಡಿಸಿ, ಸರಳವಾಗಿ ಅಚರಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಂಘ ಹಾಗೂ ಸಮುದಾಯದ ಮುಖಂಡರ ಅಭಿಪ್ರಾಯದಂತೆ ಕೆಂಪೇಗೌಡರ ಪಲ್ಲಕ್ಕಿಯನ್ನು ಸಿದ್ಧಪಡಿಸಿ ಸರ್ಕಾರ ನಿಗದಿಪಡಿಸಿದ ದಿನಾಂಕದಂದು ತಾಲೂಕು ಪಂಚಾಯತಿ ಸಭಾಂಗಣದ ಆವರಣದಲ್ಲಿ ಸರಳವಾಗಿ ಜಯಂತಿಯನ್ನು ಆಚರಣೆ ಮಾಡೋಣ. ಪ್ರತಿ ಪಂಚಾಯತಿಯಿಂದ ಕನಿಷ್ಠ 200 ಜನ ಕಾರ್ಯಕ್ರಮಕ್ಕೆ ಆಗಮಿಸುವ ಕೆಲಸ ಮಾಡಿ, ಊಟದ ವ್ಯವಸ್ಥೆ ನಾನೇ ನಿಭಾಯಿಸುತ್ತೇನೆ. ಅರ್ಥಪೂರ್ಣವಾಗಿ ಜಯಂತಿ ಆಚರಿಸಿ ಕೆಂಪೇಗೌಡರಿಗೆ ಗೌರವ ಸಲ್ಲಿಸೋಣ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ನರಸಿಂಹಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರರೆಡ್ಡಿ, ಮುಖಂಡರಾದ ವಿ.ಪ್ರಭಾಕರೆಡ್ಡಿ, ವೆಂಕಟರಂಗಾರೆಡ್ಡಿ, ಸಿ.ಎನ್.ಭಾಸ್ಕರರೆಡ್ಡಿ, ಎಸ್.ಬೈರಾರೆಡ್ಡಿ, ಪಿ.ಎಸ್.ಸುಬ್ಬಾರೆಡ್ಡಿ, ಶ್ರೀನಿವಾಸರೆಡ್ಡಿ, ಜೆಸಿಬಿ ಮಂಜುನಾಥರೆಡ್ಡಿ, ಎಚ್.ಎನ್.ಗೋವಿಂದರೆಡ್ಡಿ, ಜಯಪ್ರಕಾಶ್‌ರೆಡ್ಡಿ, ಬಾಬುರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net