

ಶಿರಸಿ: ಈ ಬಾರಿ ಕೆಂಪಡಕೆಗೆ ಉತ್ತಮ ಧಾರಣಿ ಬಂದಿದೆ. ಆದರೂ ಅಡಕೆ ಬೆಳೆಗಾರರ ಮುಖದಲ್ಲಿ ಮಂದಹಾಸವಿಲ್ಲ. ಸಕಾಲಕ್ಕೆ ಕೊನೆ ಕೊಯ್ಯುವ ಕೆಲಸಗಾರರ ಹಾಗೂ ಅಡಕೆ ಸುಲಿಯುವವರ ಅಭಾವದಿಂದ ಕೆಂಪಡಕೆ ಪ್ರಮಾಣ ಕಡಿಮೆಯಾಗಿದೆ.
ಅತಿವೃಷ್ಟಿ ಪರಿಣಾಮ ಮಲೆನಾಡಿನಲ್ಲಿ ಅಡಕೆ ಕೊಳೆ ರೋಗಕ್ಕೆ ತುತ್ತಾಗಿತ್ತು. ಹಲವೆಡೆ ಅತಿಯಾದ ಕೊಳೆ ಕಾರಣ ಅಡಕೆ ಮರವೇ ನಾಶವಾಗಿವೆ. ಹೀಗಾಗಿ ಇಳುವರಿ ಗಣನೀಯವಾಗಿ ಕುಸಿದಿದೆ. ಫಲಕ್ಕೆ ಬಂದ ಇಳುವರಿಯನ್ನೂ ಸಕಾಲಕ್ಕೆ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ಕೂಲಿಕಾರರು ಹಾಗೂ ಕೊನೆ ಕೊಯ್ಯುವವರ ಕೊರತೆಯಿಂದ ಚಾಲಿ ಅಡಕೆಯನ್ನೇ ಬೆಳೆಗಾರರು ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೆಂಪಡಕೆ ಮಾಡುವಲ್ಲಿನ ಹಲವಾರು ತೊಡಕಿನಿಂದ ಮಾರುಕಟ್ಟೆಗೆ ಬರುವ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ದರ ಏರಿದ್ದರೂ ಇಳುವರಿ ಇಲ್ಲದ್ದರಿಂದ ಬೆಳೆಗಾರರಿಗೆ ಲಾಭ ಸಿಗುತ್ತಿಲ್ಲ.
ದಶಕದಿಂದೀಚೆಗೆ ಕೆಂಪಡಕೆ ಉತ್ಪಾದನೆ ಹಾಗೂ ಆವಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕುಸಿತ ಕಂಡಿದೆ. 2010ರ ಆಸುಪಾಸು 65ರಿಂದ 70 ಸಾವಿರ ಕ್ವಿಂಟಾಲ್ ಕೆಂಪಡಕೆ ಆವಕವಾಗುತ್ತಿದ್ದ ಶಿರಸಿ ಮಾರುಕಟ್ಟೆಯಲ್ಲಿ ಪ್ರಸ್ತುತ 35ರಿಂದ 40 ಸಾವಿರ ಕ್ವಿಂಟಾಲ್ ಮಾತ್ರ ಆವಕ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ ಹಾಗೂ ಇತರ ತಾಲೂಕುಗಳಲ್ಲಿ ಅಡಕೆ ಕೊಯ್ಲು ಜೋರಾಗಿದ್ದು ಸುಲಿಯುವ, ಒಣಗಿ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಹಲವು ಅಡೆತಡೆಗಳ ಕಾರಣ ಸುಲಭವಾಗಿ ಸಂಸ್ಕರಿಸಬಹುದಾದ ಚಾಲಿ ಅಡಕೆಯತ್ತ ಅನಿವಾರ್ಯವಾಗಿ ಹೊರಳಿದ್ದಾರೆ.
ಶಿವಮೊಗ್ಗ, ಚೆನ್ನಗಿರಿ, ದಾವ ಣಗೆರೆ ಭಾಗಗಳಲ್ಲಿ ಮಲೆನಾಡ ಭಾಗಕ್ಕಿಂತ ಮುನ್ನವೇ ಕೊನೆಕೊಯ್ಲು ಸಂಪೂರ್ಣ ಮುಗಿದಿದ್ದು, ಹೊಸ ಕೆಂಪಡಕೆ ಮಾರುಕಟ್ಟೆಗೆ ಬಂದಿದೆ. ದರ ಕ್ವಿಂಟಾಲ್ ಕೆಂಪಡಕೆಗೆ 35 ಸಾವಿರಕ್ಕಿಂತ ಹೆಚ್ಚು ಏರಿಕೆ ಆಗುತ್ತಿದೆ. ಆದರೆ ಈ ಭಾಗದಲ್ಲಿ ಉತ್ಪನ್ನ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗದ ಕಾರಣ ಆ ದರ ರೈತರಿಗೆ ಸಿಗುತ್ತಿಲ್ಲ. ಇದು ಪ್ರತಿ ವರ್ಷ ಆಗುತ್ತಿದ್ದು, ಚಾಲಿ ಅಡಕೆ ಮಾಡಲು ಬೆಳೆಗಾರರು ಉತ್ಸಾಹ ತೋರುತ್ತಾರೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಕೆಂಪಡಕೆ ಇಳುವರಿ ಹಾಗೂ ಉತ್ಪಾದನೆ ಶೇ.40ರಿಂದ ಶೇ.25ಕ್ಕೆ ಕುಸಿದಿದೆ. ಪ್ರಸಕ್ತ ವರ್ಷ ಕೊಳೆ ಹಾಗೂ ಮಳೆಯ ಹೊಡೆತಕ್ಕೆ ಅಡಕೆ ಇಳುವರಿಯಲ್ಲಿ ಮತ್ತಷ್ಟು ಕುಂಠಿತವಾಗಿದೆ. ಕೊಯ್ಯುವವರು, ಕೂಲಿ, ಸುಲಿಯುವವರ ಕೊರತೆಯಿಂದಾಗಿ ಸಾಮಾನ್ಯ ಅಡಕೆ ಬೆಳೆಗಾರರಿಗೆ ಕೆಂಪಡಕೆ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇರುವ ಅಡಕೆಗೆ 5ರಿಂದ 6 ಸಾವಿರ ರೂ. ಹೆಚ್ಚು ಲಭಿಸಿದರೆ ಮಾತ್ರ ರೈತರಿಗೆ ಆಗಬಹುದಾದ ನಷ್ಟ ಸರಿದೂಗಿಸಬಹುದು. | ರವೀಶ ಹೆಗಡೆ, ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ
ಚಾಲಿ ಅಡಕೆಗೆ ಕ್ವಿಂಟಾಲ್ ಒಂದಕ್ಕೆ ಸರಾಸರಿ 26 ಸಾವಿರ ರೂ.ಗಳಿಂದ 27,500 ರೂ. ಲಭ್ಯವಾಗುತ್ತಿದೆ. ಚಾಲಿ ಅಡಕೆಯ ದರ ಏರುವ ಸೂಚನೆಯೇ ಇಲ್ಲ. ಆದರೆ ಕೆಂಪಡಕೆಗೆ ಕಳೆದ 4-5 ತಿಂಗಳಲ್ಲಿ ಕ್ವಿಂಟಾಲ್ ಒಂದಕ್ಕೆ 7-8 ಸಾವಿರ ರೂ. ಹೆಚ್ಚಾಗಿದೆ. ಹಾಗಾಗಿ ಪ್ರಸಕ್ತ ವರ್ಷ ಬಹುತೇಕ ರೈತರು ಕೆಂಪಡಕೆ ಮಾಡುವ ಇಚ್ಛೆಯಲ್ಲಿದ್ದರು. ಆದರೆ ಕೊನೆ ಕೊಯ್ಯುವ ಹಾಗೂ ಸುಲಿಯುವ ಜನರ ಅಭಾವದಿಂದ ಸಾಕಷ್ಟು ಪ್ರದೇಶಗಳಲ್ಲಿ ಹಣ್ಣಡಕೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕೆಂಪಡಕೆ ಮಾಡಲಾಗದೆ ದರ ಏರಿಕೆಯ ಪ್ರಯೋಜನ ಸಿಗುತ್ತಿಲ್ಲ. | ರವೀಂದ್ರ ಹೆಗಡೆ, ಅಡಕೆ ಬೆಳೆಗಾರ
ಹಲ್ಲಿದ್ದಾಗ ಕಡಲೆ ಇಲ್ಲದ ಸ್ಥಿತಿಯಲ್ಲಿ ಬೆಳೆಗಾರ
ಯಲ್ಲಾಪುರ: ‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಎಂಬ ಸ್ಥಿತಿ ಅಡಕೆ ಬೆಳೆಗಾರರದು. ಉತ್ತಮವಾಗಿ ಬೆಳೆ ಬಂದಾಗ ಯೋಗ್ಯ ದರ ಸಿಗದೇ ಸಂಕಟ ಪಡುವ ರೈತರಿಗೆ, ಈ ಬಾರಿ ದರ ಏರುತ್ತ ಹೊರಟಿದ್ದರೂ ಬೆಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದು ಚಿಂತೆಯುಂಟು ಮಾಡಿದೆ.
ಒಂದು ತಿಂಗಳಿನಿಂದ ಅಡಕೆ ಸೀಸನ್ ನಡೆಯುತ್ತಿದ್ದು, ಕೂಲಿಕಾರರ ಸಮಸ್ಯೆಯ ನಡುವೆಯೂ ಅಡಕೆ ಕೊಯ್ಲು, ಸುಲಿಯುವುದು, ಒಣಗಿಸುವುದು ಮುಂತಾದ ಚಟುವಟಿಕೆಗಳು ಭರದಿಂದ ಸಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿವಿಧ ಕಾರಣಗಳಿಂದಾಗಿ ಶೇ. 40-60ರಷ್ಟು ಬೆಳೆ ಕಡಿಮೆಯಾಗಿದೆ. ಕಳೆದ ವರ್ಷ ಬೇಸಿಗೆಯ ಬಿಸಿಲಿನ ಝುಳಕ್ಕೆ ತೋಟಗಳು ಕೆಂಪಾಗಿ, ಸಿಂಗಾರಗಳು ಒಣಗಿ ಬೆಳೆಯ ನಷ್ಟಕ್ಕೆ ಮುನ್ನುಡಿ ಬರೆದಿತ್ತು. ನಂತರ ಮಳೆಗಾಲದ ಸಂದರ್ಭದಲ್ಲಿ ಭಾರಿ ಪ್ರಮಾಣದ ಮಳೆಯಿಂದ ಕೊಳೆರೋಗ ಆವರಿಸಿದ ಪರಿಣಾಮ ಅಪಾರ ಬೆಳೆ ನಷ್ಟ ಉಂಟಾಗಲು ಕಾರಣವಾಯಿತು. ಅಳಿದುಳಿದ ಬೆಳೆಯನ್ನಾದರೂ ಕಾಯ್ದುಕೊಳ್ಳಲು ಔಷಧ ಸಿಂಪಡಣೆ ಇತರ ಪ್ರಯತ್ನಗಳೆಲ್ಲವೂ ಅಷ್ಟಾಗಿ ಫಲ ಕೊಡಲಿಲ್ಲ. ಆದರೆ, ಇಂಥ ಸಂದರ್ಭದಲ್ಲಿ ಅಡಕೆ ಧಾರಣೆ ಏರಿಕೆ ಹಂತದಲ್ಲಿದೆ. ಕೆಲ ದಿವಸಗಳಿಂದ ಹಳೆ ರಾಶಿ ಅಡಕೆಗೆ 34,000 ರೂ.ದಿಂದ 39,000 ರೂ.ವರೆಗೆ, ಹೊಸ ರಾಶಿ ಅಡಕೆಗೆ 34,000 ರೂ.ದಿಂದ 37,800 ರೂ. ವರೆಗೂ ದರ ಬರುತ್ತಿದೆ. ಈ ದರ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ.
ದರದಲ್ಲಿ ಏರಿಕೆಯಾಗಲು ಬೆಳೆಯ ಪ್ರಮಾಣ ಕಡಿಮೆ ಆಗಿರುವುದು ಒಂದು ಕಾರಣ. ಪ್ರತಿ ವರ್ಷ ಜನವರಿಯಲ್ಲಿ ಮಾರುಕಟ್ಟೆಗೆ ಬರುವ ಅಡಕೆ ಪ್ರಮಾಣ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಸೀಸನ್ ಬಹುತೇಕ ಮುಗಿಯುತ್ತ ಬಂದರೂ ಮಾರುಕಟ್ಟೆಗೆ ಅಡಕೆ ಬಾರದೇ ಇರುವುದರಿಂದ ಬೇಡಿಕೆ ಹೆಚ್ಚಾಗಿ ಅಧಿಕ ದರ ಬರುತ್ತಿದೆ. ಸಣ್ಣ ಬೆಳೆಗಾರರು ಸಹಕಾರಿ ಸಂಘಗಳಲ್ಲಿನ ಸಾಲ ಭರಣ ಮಾಡುವ ಅನಿವಾರ್ಯತೆಯಿಂದ ಮಾರುಕಟ್ಟೆಗೆ ಅಡಕೆ ತರುತ್ತಿದ್ದಾರೆ. ಕೆಲ ಭಾಗದಲ್ಲಿ ಮಾರಾಟಕ್ಕೆ ಅಡಕೆ ಸಿದ್ಧವಾದರೂ ದೊಡ್ಡ ಬೆಳೆಗಾರರು ಇನ್ನೂ ಹೆಚ್ಚಿನ ದರದ ನಿರೀಕ್ಷೆಯಲ್ಲಿದ್ದಾರೆ.
ಪರಿಹಾರ, ಬೆಳೆ ವಿಮೆ ಸಿಕ್ಕಿಲ್ಲ: ಶೇ.90 ರಷ್ಟು ಅಡಕೆ ತೋಟಗಳು ಕೊಳೆರೋಗಕ್ಕೆ ತುತ್ತಾಗಿದ್ದು, ಇಲಾಖಾವಾರು ನಷ್ಟದ ಸಮೀಕ್ಷೆ ನಡೆಸಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಕೊಳೆರೋಗಕ್ಕೆ ಒಂದು ಪೈಸೆ ಪರಿಹಾರ ಬಂದಿಲ್ಲ. ಬೆಳೆ ವಿಮೆ ಕೆಲ ಭತ್ತ ಬೆಳೆಯುವ ರೈತರಿಗೆ ದೊರೆತಿದ್ದು, ಅಡಕೆ ಬೆಳೆಯುವ ಬಹುತೇಕರಿಗೆ ದೊರೆತಿಲ್ಲ.
ಪ್ರತಿ ವರ್ಷ ಈ ಸಮಯದಲ್ಲಿ ಮಾರುಕಟ್ಟೆಗೆ ಬರುವ ಅಡಕೆಯ ಪ್ರಮಾಣ ಹೆಚ್ಚಿರುತ್ತಿತ್ತು. ಈ ಬಾರಿ ಗಣನೀಯವಾಗಿ ಕಡಿಮೆಯಾಗಿದೆ. ಕೊಳೆರೋಗದಿಂದ ಬೆಳೆ ನಷ್ಟ ಪ್ರಮುಖ ಕಾರಣವಾದರೆ, ಹೆಚ್ಚಿನ ದರಕ್ಕಾಗಿ ರೈತರು ಕಾಯುತ್ತಿರುವುದೂ ಕಾರಣವಾಗಿದೆ. ಇದು ಉತ್ತಮ ದರವಾಗಿದ್ದು, ಹೆಚ್ಚಿನ ನಿರೀಕ್ಷೆ ನಿರಾಸೆ ತರುವ ಮುನ್ನವೇ ರೈತರು ಮಹಸೂಲನ್ನು ಮಾರುಕಟ್ಟೆಗೆ ತರುವ ಬಗೆಗೆ ಗಮನ ಹರಿಸಿದರೆ ಉತ್ತಮ. | ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ