ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ

20kkr3(10-25 kenkeramma puje
Published on

ಕಿಕ್ಕೇರಿ: ಮೈಸೂರು ಮಹಾರಾಣಿ ದೇವಿರಮ್ಮಣಿಯ ತವರೂರಾದ ಹೋಬಳಿಯ ಮಾದಾಪುರ ಗ್ರಾಮದಲ್ಲಿ ಗ್ರಾಮದೇವತೆ ಕೆಂಕೇರಮ್ಮ ದೇವಿಗೆ ಸೋಮವಾರ ನರಕಚತುರ್ದಶಿ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.

ಮಾದಾಪುರ ಹಾಗೂ ಮಾದಾಪುರ ಕೊಪ್ಪಲು ಗ್ರಾಮಗಳ ಮಧ್ಯ ಭಾಗದಲ್ಲಿರುವ ಕೆಂಕೇರಮ್ಮ ದೇವಿ ದೇಗುಲಕ್ಕೆ ಕೆಂಕೇರಮ್ಮ ಚಾರಿಟಬಲ್ ಕಲ್ಚರಲ್ ಟ್ರಸ್ಟ್ ಹಾಗೂ ವಿಪ್ರ ವೃಂದದವರು ತೆರಳಿ ತಳಿರು ತೋರಣ, ಪುಷ್ಪಗಳಿಂದ ದೇಗುಲ ಅಲಂಕರಿಸಿದರು. ಮಹಿಳೆಯರು ರಂಗೋಲಿ ಬಿಡಿಸಿದರು. ದೇಗುಲ ಒಳ, ಹೊರಾಲಯ, ಅಶ್ವತ್ಥ ವೃಕ್ಷದ ಕಟ್ಟೆಯನ್ನು ಗೋಮಯ, ಗಂಧೋದಕ, ಪಂಚಗವ್ಯಗಳಿಂದ ಶುಚಿಗೊಳಿಸಿದರು.

ವಿವಿಧ ಪುಷ್ಪಗಳಿಂದ ಸಿಂಗರಿಸಿದರು. ಮೂಲದೇವಿ, ಉತ್ಸವ ಮೂರ್ತಿಗೆ ವಸ್ತ್ರಾಭರಣ ತೊಡಿಸಿದರು. ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಿತು. ಮಹಿಳೆಯರು ಲಲಿತಾ ಸಹಸ್ರನಾಮ ಪಠಿಸಿದರು. ಗಣಪತಿ ಹೋಮ, ನವಗ್ರಹ ಹೋಮ ನಡೆದವು.

ಬಲಿಪಾಡ್ಯಮಿ ಮರು ದಿನದಿಂದ ಒಂದು ತಿಂಗಳು ದೇಗುಲ ಮುಚ್ಚುವುದರಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು. ದೇವಿಗೆ ಹಣ್ಣು, ಕಾಯಿ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net