ಕೃಷ್ಣೆಗಾಗಿ ಅಹೋರಾತ್ರಿ ಧರಣಿ ಆರಂಭ

bkt-3-2
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಅಹೋರಾತ್ರಿ ಧರಣಿ, ಸರದಿ ಉಪವಾಸ ಸತ್ಯಾಗ್ರಹ ಆರಂಭ. ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕುಂದರಗಿ ವೀರಸಂಗಮೇಶ್ವರ ಸ್ವಾಮೀಜಿ, ಬೀಳಗಿ ಗುರುಪಾದ ಸ್ವಾಮೀಜಿ, ಮನ್ನಿಕಟ್ಟಿಯ ಶ್ರೀಗಳು, ಶಾಸಕರಾದ ಜೆ.ಟಿ.ಪಾಟೀಲ, ಜಗದೀಶ ಗುಡಗುಂಟಿ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಅಜಯಕುಮಾರ ಸರನಾಯಕ ಭಾಗವಹಿಸಿರುವುದು
Published on

ಬಾಗಲಕೋಟೆ: ದಶಕಗಳಿಂದಲು ಆಮಗತಿಯಲ್ಲಿ ಸಾಗುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು, ೧೫ ಲಕ್ಷ ಎಕರೇ ನೀರಾವರಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಕೋಟೆನಗರಲ್ಲಿ ಅಹೋರಾತ್ರಿ ಧರಣಿ ಆರಂಭವಾಗಿದೆ.

ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯ ಸಂತ್ರಸ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಬಳಿಕ ಜಿಲ್ಲಾಡಳಿತ ಭವನ ಎದುರು ಟೆಂಟ್ ಹಾಕಿ ಅಲ್ಲಿ ಊಟ, ವಸತಿ ಸಮೇತ ಧರಣಿ ಆರಂಭಿಸಿದ್ದು, ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನಕ್ಕೆ ಕೃಷ್ಣಾ ತೀರದ ಜನ ಮುಂದಾಗಿದ್ದಾರೆ. ವಿವಿಧ ಮಠಾಧೀಶರು, ವಿವಿಧ ಪಕ್ಷದ ನಾಯಕರು ಪಕ್ಷ ಬೇಧ ಮರೆತು ಭಾಗವಹಿಸಿ ಹೋರಾಟದ ಕಹಳೆ ಮೊಳಗಿಸಿದರು.

ಆಲಮಟ್ಟಿ ಆಣೆಕಟ್ಟು ೫೨೪ ಮೀಟರ ವರೆಗೆ ಭೂ ಸ್ವಾಧೀನ ಪಡಿಸಿಕೊಂಡಿ ಆಣೆಕಟ್ಟು ಎತ್ತರ ಹೆಚ್ಚಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ವೇಳೆ ಸಮಾವೇಶದಲ್ಲಿ ನೀಡಿರುವ ೬ನೇ ಗ್ಯಾರಂಟಿಯಾದ ನೀರಾವರಿಗೆ ಪ್ರತಿ ವರ್ಷ ೪೦,೦೦೦ ಕೋಟಿಯಂತೆ ಐದು ವರ್ಷದಲ್ಲಿ ೨ ಲಕ್ಷ ಕೋಟಿ ಹಣ ಒದಗಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ೩ನೇ ಹಂತ ಪೂರ್ಣಗೊಳಿಸಬೇಕು. ಎಲ್ಲ ಸರ್ಕಾರಗಳು ಸುಳ್ಳು ಆಶ್ವಾಸನೇ ನೀಡಿ ಹೋಗುತ್ತೀವೆ. ಇದರಿಂದ ನಮ್ಮ ಭಾಗದ ಜೀವನಾಡಿ ಕೃಷ್ಣೆಗೆ ನ್ಯಾಯ ಸಿಗುತ್ತಿಲ್ಲ. ಲಕ್ಷಾಂತರ ಕೋಟಿ ಬೆಲೆ ಬಾಳುವ ಬೆಂಗಳೂರಿನಲ್ಲಿಯ ಸರ್ಕಾರ ಆಸ್ತಿ ಮಾರಾಟ ಮಾಡಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕು. ಹೋರಾಟ ಇಲ್ಲಿಗೆ ಕೈ ಬಿಡುವದಿಲ್ಲ. ಅನುಷ್ಠಾನಕ್ಕೆ ಸರ್ಕಾರ ಮುಂದಡಿ ಇಟ್ಟಮೇಲೆ ಹಿಂಪಡೆಲಾಗುವುದು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕುಂದರಗಿ ವೀರಸಂಗಮೇಶ್ವರ ಸ್ವಾಮೀಜಿ, ಬೀಳಗಿ ಗುರುಪಾದ ಸ್ವಾಮೀಜಿ, ಮನ್ನಿಕಟ್ಟಿಯ ಶ್ರೀಗಳು, ಜ್ಞಾನ ಮಯಾನಂದ ಸ್ವಾಮೀಜಿ, ಮಲ್ಲಿನಾಥ ಸ್ವಾಮೀಜಿ, ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ, ಶಾಸಕರಾದ ಜಗದೀಶ ಗುಡಗುಂಟಿ, ಜೆ.ಟಿ.ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಎಸ್.ಕೆ.ಬೆಳ್ಳುಬ್ಬಿ, ವಿ.ಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net