

ಬಾಗಲಕೋಟೆ: ಕೃಷ್ಣಾ ನದಿ ಹಿನ್ನೀರಿನಲ್ಲಿ ಈಜಿಕೊಂಡು ಗ್ರಾಮಕ್ಕೆ ತೆರಳುವ ವೇಳೆ ನೀರಿನ ಒತ್ತಡ ಜಾಸ್ತಿಯಾಗಿ ಮುಳುಗಿದ್ದ ವೃದ್ಧ ವ್ಯಕ್ತಿಯೊಬ್ಬರು ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.
ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ಈಶ್ವರಪ್ಪ ಸಿದ್ದಣ್ಣವರ(೬೦) ಮೃತ ದುದೈವಿ ಎಂದು ಗುರುತಿಸಲಾಗಿದೆ. ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ನದಿ ತೀರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರ ಗ್ರಾಮದಿಂದ ಬೇರೆ ಊರಿಗೆ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದ್ದರಿಂದ ಸ್ಥಳೀಯರು ಹುಡುಕಾಟ ನಡೆಸಿದ್ದರು. ಬುಧವಾರ ಬೆಳಗ್ಗೆ ಜಮಖಂಡಿ ತಹಸೀಲ್ದಾರ್ ಅವರ ಗಮನಕ್ಕೆ ತಂದಿದ್ದರು. ಜಮಖಂಡಿಯಿಂದ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಹೋಗುವಷ್ಟರದಲ್ಲಿ ನದಿ ಹಿನ್ನೀರಿನಲ್ಲಿ ಶವ ಪತ್ತೆ ಆಗಿದೆ ಎಂದು ಜಮಖಂಡಿ ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
ಕಂಕಣವಾಡಿ ಕ್ರಾಸ್ ನಿಂದ ಕಂಕಣವಾಡಿ ಗ್ರಾಮಕ್ಕೆ ತೆರಳುವ ಮಧ್ಯ ನದಿ ಹಿನ್ನೀರಿನಲ್ಲಿ ಈಜಿಕೊಂಡು ಗ್ರಾಮಕ್ಕೆ ಹೋಗುವಾಗ ನಾಪತ್ತೆ ಆಗಿದ್ದರು ಎಂದು ಹೇಳಲಾಗುತ್ತಿದೆ. ಪ್ರವಾಹ ಸ್ಥಿತಿ ನಿರ್ಮಾಣವಾದ ಬಳಿಕ ಜುಲೈ ಅಂತ್ಯದಲ್ಲಿ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ೫ ವರ್ಷದ ಬಾಲಕಿ ಹಾಗೂ ಆಲಗೂರ ಗ್ರಾಮದಲ್ಲಿ ೬೦ ವಯಸ್ಸಿನ ವ್ಯಕ್ತಿಯೊಬ್ಬರು ಕೃಷ್ಣಾ ಹಿನ್ನೀರಿಗೆ ಸಿಕ್ಕು ಸಾವನ್ನಪ್ಪಿದ್ದರು. ಇದೀಗ ನದಿ ಹಿನ್ನೀರಲ್ಲಿ ಮತ್ತೊಬ್ಬ ಸಾವನ್ನಪ್ಪಿದ್ದು, ಕಳೆದ ಹತ್ತು ದಿನಗಳಲ್ಲಿ ಮೂರು ಬಲಿಯಾಗಿದ್ದಾರೆ.