ಕೃಷ್ಣಾ ಯೋಜನೆಗಾಗಿ ೨ನೇ ಆಹೋರಾತ್ರಿ ಧರಣಿ

bkt-04-15
ಬಾಗಲಕೋಟೆ ಜಿಲ್ಲಾಡಳಿತ ಭವನದ ಪ್ರವೇಶದ ದ್ವಾರದ ಎದುರು ಮುಳುಗಡೆ ಸಂಸತ್ರಸ್ತರು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಜಿಲ್ಲಾಡಳಿತ ಭವನದ ಎದುರಿನ ರಸ್ತೆಯಲ್ಲೆ ಅಡುಗೆ ತಯಾರಿಸಿದ ಪ್ರತಿಭಟನಾಕಾರರು. ಹೋರಾಟ ಸಮಿತಿ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಇದ್ದರು.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ಇಲ್ಲವೇ ಯೋಜನೆ ಕೈಬಿಟ್ಟು ರೈತರನ್ನು ರಕ್ಷಿಸಿ ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಆಹೋರಾತ್ರಿ ಆರಂಭವಾಗಿರುವ ಧರಣಿ ಉಪವಾಸ ಸತ್ಯಾಗ್ರಹ ಬುಧವಾರ ಎರಡನೇ ದಿನ ಪೂರೈಸಿದೆ.

ಹೋರಾಟದ ಸ್ಥಳಕ್ಕೆ ಬುಧವಾರ ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ವಿವಿಧ ಸಂಘಟನೆಗಳು ಪಕ್ಷ ಬೇಧ ಮರೆತು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಧರಣಿಯಲ್ಲಿ ಪಾಲ್ಗೊಂಡರು.

ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಇಂದು ಜಿಲ್ಲಾ ವಕೀಲರ ಪರಿಷತ್ ವತಿಯಿಂದ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಹೋರಾಟದಲ್ಲಿ ಭಾಗಿಯಾಗಿ ಯೋಜನೆ ಪೂರ್ಣಗೊಳಿಸಿಬೇಕು ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು. ಜೊತೆಗೆ ಹೋರಾಟಕ್ಕೆ ಇನ್ನಷ್ಟು ತೀವ್ರತೆ ಉಂಟು ಮಾಡಲು ನ್ಯಾಯಾಲಯದ ಕಲಾಪದಿಂದ ದೂರ ಉಳಿದ ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ಯೋಜನೆ ಬಗ್ಗೆ ನಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿಯೂ ಹೇಳಿದರು.

ಇನ್ನು ಹೋರಾಟದ ಸ್ಥಳಕ್ಕೆ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಡಾ.ಶೇಖರ ಮಾನೆ, ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಿಜೆಪಿ ಮುಖಂಡ ಅರುಣ ಕಾರಜೋಳ ಭೇಟಿ ನೀಡಿ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೊಣ. ನಿಮ್ಮ ಜೊತೆಗೆ ತಾವು ಸದಾ ಇರುವುದಾಗಿ ಅಭಯ ನೀಡಿದರು.

ಹೋರಾಟ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಪ್ರಕಾಶ ಅಂತರಗೊಂಡ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ನಾಗೇಶ ಗೋಲಶೆಟ್ಟಿ ಸೇರಿ ವಿವಿಧ ಸಂಘಟನೆ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಹೋರಾಟವನ್ನು ಪ್ರತಿ ದಿನ ವಿವಿಧ ರೀತಿಯಲ್ಲಿ ನಡೆಸಲು ನಿರ್ಧರಿಸಿರುವ ಹೋರಾಟ ಸಮಿತಿಯೂ ಗುರುವಾರ ಮಧ್ಯಾಹ್ಮ ಬಾಗಲಕೋಟೆಯಲ್ಲಿ ಇರುವ ಪುನರ್ ವಸತಿ ಮತ್ತುಯ ಪುನರ್ ನಿರ್ಮಾಣ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದು ಹಾಗೂ ಕಚೇರಿಗೆ ಬೀಗ ಜಡಿಯುವ ಹೋರಾಟ ಹಮ್ಮಿಕೊಂಡಿದ್ದಾರೆ.

ಸದ್ಯ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಇರುವ ಹೋರಾಟ ವೇದಿಕೆಯಿಂದ ಗುರುವಾರ ಮಧ್ಯಾಹ್ನ ೧೨ಕ್ಕೆ ಪಾದಯಾತ್ರೆ ಮೂಲಕ ಆಯುಕ್ತರ ಕಚೇರಿಗೆ ಸಾವಿರಾರು ಜನರು ಮುತ್ತಿಗೆ ಹಾಕಿ, ಕಚೇರಿಗೆ ಬೀಗ ಹಾಕುವುದಾಗಿ ಹೋರಾಟ ಸಮಿತಿಯವರು ತಿಳಿಸಿದರು. ಹಾಗೆಯೇ ಬುಧವಾರ ರಾತ್ರಿ ಸಂತ್ರಸ್ತ ಕುಟುಂಬಗಳ ಮಹಿಳೆಯರು ಧರಣಿ ಸ್ಥಳಕ್ಕೆ ಆಗಮಿಸಿ, ರಾತ್ರಿ ಜಿಲ್ಲಾಡಳಿತ ಭವನದ ಎದುರು ರಸ್ತೆಯಲ್ಲಿ ಅಡುಗೆ ತಯಾರಿಸಿ, ರಸ್ತೆಯಲ್ಲೆ ಕುಳಿತು ಊಟ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net