

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ೫೨೪ ಮೀಟರ ವರೆಗೆ ಭೂ ಸ್ವಾಧೀನ ಪಡಿಸಿಕೊಂಡಿ ಆಣೆಕಟ್ಟು ಎತ್ತರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಕೋಟೆನಗರಿಯಲ್ಲಿ ಬೃಹತ್ ಹೋರಾಟ ಮಂಗಳವಾರದಿಂದ ಆರಂಭಿಸಿದೆ.
ಬಾಗಲಕೋಟೆ-ವಿಜಯಪುರ ಜಿಲ್ಲೆಯ ಸಂತ್ರಸ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮೊತ್ತೊಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ. ಪಕ್ಷ ಬೇಧ ಮರೆತು ಪ್ರಮುಖ ನಾಯಕರು, ಕನ್ನಡ ಪರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿ ಅಹೋರಾತ್ರಿ ಧರಣಿಗೆ ಚಾಲನೆ ನೀಡಿದರು. ತನ್ಮೂಲಕ ಕೃಷ್ಣೆಗಾಗಿ ಹೋರಾಟ ಕಿಚ್ಚು ಮತ್ತೊಮ್ಮೆ ಮೊಳಗಿಸಿದರು.
ಕರಡಿ ಮಜಲು, ಡೊಳ್ಳು ವಾದನದ ಮೂಲಕ ನವನಗರದ ಕಾಳಿದಾಸ ವೃತ್ತದಿಂದ ಆರಂಭವಾದ ಬೃಹತ್ ಪ್ರತಿಭಟನಾ ರ‍್ಯಾಲಿಯು ಜಿಲ್ಲಾ ಆಸ್ಪತ್ರೆ, ನಗರಸಭೆ, ಬಸವೇಶ್ವರ ಬ್ಯಾಂಕ್, ಕೋರ್ಟ್ ಸಂಕೀರ್ಣ, ಎಸ್ಪಿ ಕಚೇರಿ ರಸ್ತೆ ಮೂಲಕ ಜಿಲ್ಲಾಡಳಿತ ಭವನ ತಲುಪಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಂತ್ರಸ್ತರು ಸರ್ಕಾರದ ವಿರುದ್ಧ ತಮ್ಮ ಬೇಡಿಕೆ ಪಟ್ಟಿ ಇಡುತ್ತಲೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ವೇಳೆ ಸಮಾವೇಶದಲ್ಲಿ ನೀಡಿರುವ ೬ನೇ ಗ್ಯಾರಂಟಿಯಾದ ನೀರಾವರಿಗೆ ಪ್ರತಿ ವರ್ಷ ೪೦,೦೦೦ ಕೋಟಿಯಂತೆ ಐದು ವರ್ಷದಲ್ಲಿ ೨ ಲಕ್ಷ ಕೋಟಿ ಹಣ ಒದಗಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ೩ನೇ ಹಂತ ಪೂರ್ಣಗೊಳಿಸಬೇಕು. ತನ್ಮೂಲಕ ೧೩೦ ಟಿ. ಎಂ.ಸಿ ನೀರನ್ನು ಬಳಸಿಕೊಂಡು ೧೫ ಲಕ್ಷ ಎಕರೆ ನೀರಾವರಿ ಒಳಪಡಿಸಬೇಕು, ೨೦೨೩ ನೇ ಸಾಲಿನಲ್ಲಿ ೪೦೦೦೦ ಕೋಟಿ ರೂ. ಹಾಗೂ ೨೦೨೪ನೆ ಸಾಲಿನ ೪೦೦೦೦ ಕೋಟಿ ರೂ. ಸೇರಿದಂತೆ ಒಟ್ಟು ೮೦೦೦೦ ಕೋಟಿ ರೂ. ನೀರಾವರಿ ಯೋಜನೆಗಳಿಗಾಗಿ ಒದಗಿಸಿ ನುಡಿದಂತೆ ನಡೆದುಕೊಳ್ಳಬೇಕು. ಮುಖ್ಯವಾಗಿ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ೩ನೇ ಹಂತವನ್ನು ಪೂರ್ಣಗೊಳಿಸಬೇಕು.
ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ೭೫,೦೦೦ ಎಕರೆ ಜಮೀನು ಹಾಗೂ ಮುಳುಗಡೆಯಾಗುವ ೨೦ ಗ್ರಾಮಗಳ ಭೂ ಸ್ವಾಧೀನ ಪ್ರಕ್ರಿಯ ಚಾಲ್ತಿಯಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧವಿರುವದರಿಂದ ಬಾಂಽತ ಸಂತ್ರಸ್ತರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಹೀಗಾಗಿ ೫೨೪ ಮೀಟರ್ ಏಕಕಾಲಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು. ಇಲ್ಲವಾದಲ್ಲಿ ಅತಂತ್ರ ಸ್ಥಿತಿ ಹೋಗಲಾಡಿಸಬೇಕು.
ಭೂಸ್ವಾಧೀನ ಪ್ರಕ್ರಿಯೆ ಭೂ ಕಾಯ್ದೆಯ ನಿಯಮದಂತೆ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿರುವ ಹಾಗೂ ಈಗಾಗಲೇ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡುವುದು ಬಾಕಿ ಇದ್ದು, ವಿಳಂಬ ಮಾಡದೆ ತಕ್ಷಣ ಬಿಡುಗಡೆ ಮಾಡಬೇಕು. ಭೂಮಿಯ ಮೂಲ ಬೆಲೆಗೆ ವಿಳಂಬದ ಅವಧಿಯಲ್ಲಿ ಶೇ.೧೫ ಬಡ್ಡಿ ಸರ್ಕಾರ ನೀಡಬೇಕು. ಈ ಹಿಂದಿನ ಸರ್ಕಾರ ಖುಷ್ಕಿ ಜಮೀನಿಗೆ ೨೦ ಲಕ್ಷ ರೂ., ನೀರಾವರಿಗೆ ೨೪ ಲಕ್ಷ ರೂ. ದರ ನಿಗಽ ಪಡಿಸಿದೆ. ಇದನ್ನು ಪರಿಷ್ಕರಿಸಿ ನೀರಾವರಿಗೆ ೫೦ ಲಕ್ಷ ರೂ. ಖುಷ್ಕಿ ಜಮೀನಿಗೆ ೪೦ ಲಕ್ಷ ರೂ. ನಿಗಧಿಪಡಿಸಬೇಕು. ಪುನರ್ ವಸತಿ ಕೇಂದ್ರಗಳಿಗೆ ಸಕಲ ಸೌಲಭ್ಯ ಒದಗಿಸಬೇಕು, ಕಟ್ಟಡಗಳಿಗೆ ಸವಕಳಿ ಕಡಿತಗೊಳಿಸಬಾರದು, ಪುನರ್ ವಸತಿ ಕೇಂದ್ರಕ್ಕಾಗಿ ಭೂಮಿ ಕಳೆದುಕೊಂಡವರನ್ನು ಸಂತ್ರಸ್ತರು ಅಂತ ಪರಿಗಣಿಸಬೇಕು ಸೇರಿದಂತೆ ೩೪ ಬೇಡಿಕೆಗಳ ಜಿಲ್ಲಾಽಕಾರಿ ಜಾನಕಿ ಕೆ.ಎಂ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕುಂದರಗಿ ವೀರಸಂಗಮೇಶ್ವರ ಸ್ವಾಮೀಜಿ, ಬೀಳಗಿ ಗುರುಪಾದ ಸ್ವಾಮೀಜಿ, ಮನ್ನಿಕಟ್ಟಿಯ ಶ್ರೀಗಳು, ಜ್ಞಾನ ಮಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ, ಶಾಸಕರಾದ ಜಗದೀಶ ಗುಡಗುಂಟಿ, ಜೆ.ಟಿ.ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಎಸ್.ಕೆ.ಬೆಳ್ಳುಬ್ಬಿ, ಜಿ.ಎಸ್. ನ್ಯಾಮಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಮೋಹನ ಜಾಧವ, ಡಾ.ಎಂ.ಎಸ್. ದಡ್ಡೇನವರ, ಶಿವಾನಂದ ಟವಳಿ ಸೇರಿದಂತೆ ಸಾವಿರಾರು ಸಂತ್ರಸ್ತರು ಭಾಗವಹಿಸಿದ್ದರು.