

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಗುರುವಾರ ವೇದಗಂಗಾ ಮತ್ತು ದೂಧಗಂಗಾ ಒಂದು ಅಡಿ ಮತ್ತು ಕೃಷ್ಣಾ ನದಿ ನೀರಿನ ಮಟ್ಟ ಎರಡು ಅಡಿ ಏರಿಕೆಯಾಗಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಪಂಚ ನದಿಗಳಿಗೆ 1,26,317 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಸುಳಕುಡ ಬ್ಯಾರೇಜ್‌ನಿಂದ ದೂಧಗಂಗಾ ನದಿಗೆ 26,400 ಕ್ಯೂಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 99,917 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.
ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಹಾಗೂ ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್ ಜಲಾವೃತಗೊಂಡಿದ್ದು, ಯಕ್ಸಂಬಾ-ದಾನವಾಡ, ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯ ಹಂತ ತಲುಪಿವೆ.
ಮಹಾರಾಷ್ಟ್ರ ಜಲಾಶಯಗಳಿಂದ ನೀರು: ಕೋಯ್ನ-33,050, ಧೂಮ-4,610, ಕನ್ಹೇರಿ-3,885, ವಾರಣಾ-3,885, ಕಳಮ್ಮವಾಡಿ-5,000, ರಾಧಾನಗರಿ-2,928 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಕೊಯ್ನ- 86, ವಾರಣಾ-31, ಕಾಳಮ್ಮಾವಾಡಿ-34, ಮಹಾಬಳೇಶ್ವರ-87, ನವಜಾ-94, ರಾಧಾನಗರಿ-34, ಕೊಲ್ಲಾಪುರ-7 ಮತ್ತು ಸಾಂಗಲಿ-3 ಮಿಮೀ ಮಳೆಯಾಗಿದೆ.
ಅಥಣಿ ವರದಿ: ತಾಲೂಕಿನ ಕೃಷ್ಣಾ ನದಿ ಪಾತ್ರದ ಹುಲಗಬಾಳಿ, ದರೂರ, ಹಲ್ಯಾಳ ಸೇರಿ ವಿವಿಧೆಡೆ ತಹಸೀಲ್ದಾರ್ ಸಿದರಾಯ ಭೋಸಗಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಹಿಪ್ಪರಗಿ ಡ್ಯಾಂನ 22 ಗೇಟ್ ಓಪನ್ ಮಾಡಿದ್ದರಿಂದ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಜುಗೂಳ ಗ್ರಾಮದಲ್ಲಿ 2 ಅಡಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಜನರಿಗೆ ಮುನ್ನಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು. ವಿವಿಧ ಗ್ರಾಮಗಳಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನೀರಾವರಿ ಇಲಾಖೆ ಸಹಾಯಕ ಅಭಿಯಂತ ಪ್ರವೀಣ ಹುಣಸಿಕಟ್ಟಿ ಮಾತನಾಡಿ, ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯಾವುದೇ ತೊಂದರೆಯಿಲ್ಲ. ಜಮಖಂಡಿ ತಾಲೂಕಿನ ಅಧಿಕಾರಿಗಳು ಹಿಪ್ಪರಗಿ ಡ್ಯಾಂ ಬಳಿ ಪರಿಶೀಲಿಸಿದ್ದಾರೆ. ಅಥಣಿ, ಕಾಗವಾಡದ ಕೃಷ್ಣಾ ನದಿ ಪಾತ್ರದ ಜನರು ಆತಂಕ ಪಡುವ ಅಗತ್ಯವಿಲ್ಲವೆಂದರು.
ಬಿಟ್ಟು ಬಿಟ್ಟು ಸುರಿಯುತ್ತಿರುವ ವರ್ಷಧಾರೆ: ಬೆಳಗಾವಿ: ನಗರದಲ್ಲಿ 5-6 ದಿನಗಳಿಂದ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ಗುರುವಾರವೂ ಬೆಳಗ್ಗೆ, ಸಂಜೆ ಮಳೆ ಸುರಿಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದು, ಜನಸಂಚಾರಕ್ಕೆ ತೊಂದರೆಯಾಗಿದೆ. ನರಗುಂದಕರ ಭಾವೆ ಚೌಕ್, ವಡಗಾವಿ ಬಜಾರ್ ಗಲ್ಲಿ ಸೇರಿ ನಗರದ ಹಲವು ಕಡೆಗಳ ತರಕಾರಿ ಮಾರುಕಟ್ಟೆಗಳಲ್ಲಿ ಮಳೆಯಿಂದಾಗಿ ಕೆಸರು ಸೃಷ್ಟಿಯಾಗಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಮಳೆಯಲ್ಲೇ ವಹಿವಾಟು ನಡೆಸುತ್ತಿದ್ದಾರೆ. ಹಳೇ ಪಿ.ಬಿ.ರಸ್ತೆ, ಗಾಂಧಿನಗರ ಇತರೆಡೆ ವಾಹನ ಸವಾರರಿಗೆ ತೊಂದರೆಯಾಗಿದೆ. ಹೊಲ-ಗದ್ದೆಗಳಲ್ಲೂ ನೀರು ನಿಲ್ಲುತ್ತಿದೆ.