

ಗುಂಡ್ಲುಪೇಟೆ: ತಾಲೂಕಿನ ಕೃಷಿಕ ಸಮಾಜದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.
14 ವರ್ಷಗಳಿಂದ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣೆ ನಿಗದಿಯಾಗಿತ್ತು. 14 ನಿರ್ದೇಶಕರ ಸ್ಥಾನಗಳಿಗೆ 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 430 ಮತದಾರರಲ್ಲಿ ಸುಮಾರು 80 ಹೆಚ್ಚು ಜನರು ನಿಧನರಾಗಿದ್ದಾರೆ. ಸುಮಾರು 30 ಜನರು ಮತದಾನದಿಂದ ದೂರ ಉಳಿದರು. ಸುಮಾರು 320 ಜನರು ತಮ್ಮ ಹಕ್ಕು ಚಲಾಯಿಸಿದರು. ಪ್ರತಿಯೊಬ್ಬರೂ 15 ಮತಗಳನ್ನು ಚಲಾಯಿಸಿದರು.
ಮಧ್ಯಾಹ್ನ 3 ಗಂಟೆಗೆ ಮತದಾನ ಅವಧಿ ಮುಗಿದ ಕೂಡಲೇ ಎಣಿಕೆ ಆರಂಭಿಸಲಾಗುವುದು. ಇದಕ್ಕಾಗಿ ನಾಲ್ವರು ನಿವೃತ್ತ ಸರ್ಕಾರಿ ನೌಕರರನ್ನು ನಿಯೋಜಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್ ‘ವಿಜಯವಾಣಿ’ಗೆ ತಿಳಿಸಿದರು.