ಕೃಷಿ ಸಚಿವ ಬಿ.ಸಿ. ಪಾಟೀಲ ಕ್ಷೇತ್ರಕ್ಕಿಂದು

12 hkr 02
Published on

ಹಿರೇಕೆರೂರ: ತಾಲೂಕಿಗೆ ಹಲವು ವರ್ಷಗಳ ನಂತರ ಸಚಿವ ಸ್ಥಾನ ಒಲಿದಿದೆ. ಶಾಸಕ ಬಿ.ಸಿ. ಪಾಟೀಲ ರಾಜ್ಯ ಸಂಪುಟ ದರ್ಜೆಯ ಕೃಷಿ ಸಚಿವರಾಗಿ ನೇಮಕವಾಗಿದ್ದು, ಕ್ಷೇತ್ರಕ್ಕೆ ಗುರುವಾರ ಆಗಮಿಸಲಿರುವ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದು ರಾಜ್ಯ ಉಗ್ರಾಮ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ತಿಳಿಸಿದರು.

ಫೆ. 14ರಂದು ತಾಲೂಕಿನ ಬತ್ತಿಕೊಪ್ಪ ಕ್ರಾಸಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಲಿದ್ದು, ಅಲ್ಲಿಂದ ಬೃಹತ್ ಸಂಖ್ಯೆಯಲ್ಲಿ ಬೈಕ್, ಕಾರು ರ‍್ಯಾಲಿ ಮೂಲಕ ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತಕ್ಕೆ ಆಗಮಿಸುವರು. ನಂತರ ಎತ್ತಿನ ಚಕ್ಕಡಿಗಾಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ನಂತರ ಸಚಿವ ಬಿ.ಸಿ. ಪಾಟೀಲ್ ನಿವಾಸದ ಹಿಂಭಾಗದಲ್ಲಿನ ದಿ.ಶಿವಮ್ಮ ಚನ್ನಬಸನಗೌಡ ಪಾಟೀಲ ರಂಗಮಂದಿರದಲ್ಲಿ ಸಾರ್ವಜನಿಕ ಸಭೆ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ತಾಪಂ ಅಧ್ಯಕ್ಷ ರಾಜು ಬಣಕಾರ, ಎಪಿಎಂಸಿ ಅಧ್ಯಕ್ಷ ಸಿದ್ದಪ್ಪ ಕರೇಗೌಡ್ರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಪಿಎಲ್​ಡಿ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸುವರು. ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಬಣಕಾರ ತಿಳಿಸಿದರು.

ತಾಪಂ ಅಧ್ಯಕ್ಷ ರಾಜು ಬಣಕಾರ, ಜಿಪಂ ಸದಸ್ಯರಾದ ಎನ್.ಎಂ. ಈಟೇರ, ಶಿವರಾಜ ಹರಿಜನ, ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ, ಎಪಿಎಂಸಿ ಉಪಾಧ್ಯಕ್ಷೆ ಕವಿತಾ ಭರಮಗೌಡ್ರ, ತಾಪಂ ಸದಸ್ಯ ಮಹೇಶ ಗುಬ್ಬಿ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಎತ್ತಿನಹಳ್ಳಿ, ಅಶೋಕ ಜಾಡಬಂದಿ, ಎಪಿಎಂಸಿ ಸದಸ್ಯರಾದ ಸಿದ್ದಪ್ಪ ಹಂಪಣ್ಣನವರ, ಹನುಮಂತಪ್ಪ ಹಡಗದ, ಭೂತಲಿಂಗಪ್ಪ ಅಬಲೂರ, ವಿನೋದಾ ಬೆನ್ನೂರ, ರಮೇಶ ಮಾಳಮ್ಮನವರ, ನಿಂಗರಾಜ ಕರಡೇರ, ರಾಮನಗೌಡ ಹಳ್ಳಪ್ಪಗೌಡ್ರ, ಮೋಹನಗೌಡ ಪಾಟೀಲ, ರೇಣುಕಾ ವಡೆಯನಪುರ, ಮುಖಂಡರಾದ ದತ್ತಾತ್ರೇಯ ರಾಯ್ಕರ, ಕರೇಗೌಡ ಸಣ್ಣಕ್ಕಿ ಹಾಗೂ ಮತ್ತಿತರರು ಇದ್ದರು.

ಎಪಿಎಂಸಿಗೆ ಅಧ್ಯಕ್ಷರಾಗಿ ಆಯ್ಕೆ: ಹಿರೇಕೆರೂರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸಿದ್ದಪ್ಪ ಕರೇಗೌಡ್ರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದಿನ ಅಧ್ಯಕ್ಷ ವಸಂತ ದ್ಯಾವಕ್ಕಳವರ ಅವರ ಅವಿಶ್ವಾಸ ಮಂಡನೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಎಪಿಎಂಸಿಯ ಕಚೇರಿಯಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಕರೇಗೌಡ್ರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ನಂತರ ನೂತನ ಅಧ್ಯಕ್ಷರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಎಲ್ಲರ ಅಭಿಪ್ರಾಯದಂತೆ ಒಮ್ಮತದಿಂದ ಎಪಿಎಂಸಿಗೆ ಸಿದ್ದಪ್ಪ ಕರೇಗೌಡ್ರ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು. ನೂತನ ಅಧ್ಯಕ್ಷ ಸಿದ್ದಪ್ಪ ಕರೇಗೌಡ್ರ ಮಾತನಾಡಿ, ಎಲ್ಲ ಹಿರಿಯರ ಮತ್ತು ಸರ್ವ ಸದಸ್ಯರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಪಡೆದುಕೊಂಡು ಎಪಿಎಂಸಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net