ಕೃಷಿ ಚಟುವಟಿಕೆ ಸೀಲ್​ಡೌನ್!

26sirsi2- halu bitta bhumi
Published on

ಶಿರಸಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕರೊನಾ ಸೋಂಕು ಹರಡಿದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಬಹುತೇಕ ಗ್ರಾಮಗಳು ಕಂಟೇನ್ಮೆಂಟ್ ಜೋನ್, ಸೀಲ್​ಡೌನ್ ಆಗುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ.

ಕರೊನಾ ಮೊದಲ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಂಡು ಬಂದಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಮನೆಯಿಂದ ಹೊರಗೆ ಬರದಂತೆ ಮಾಡಿದೆ. ಇತ್ತೀಚೆಗೆ ಉತ್ತಮ ಮಳೆಯಾದ ಕಾರಣ ಭೂಮಿ ಹದಗೊಳಿಸಲು ರೈತರು ಮುಂದಾದರೂ, ಗ್ರಾಮಗಳ ಸೀಲ್​ಡೌನ್ ಪ್ರಕ್ರಿಯೆಯಿಂದ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿದೆ. ಜಿಲ್ಲೆಯ 12 ತಾಲೂಕುಗಳಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಪ್ರದೇಶಗಳೆಂದು ಘೊಷಿಸಿದ್ದು, ಕೆಲವು ಪ್ರದೇಶಗಳನ್ನು ಸೀಲ್​ಡೌನ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರಬರದಂತೆ ಸೂಚಿಸಲಾಗಿದೆ. ಇದು ಕೃಷಿ ಚಟುವಟಿಕೆ ನಡೆಸಲು ರೈತರಿಗೆ ತೊಡಕಾಗಿ ಮಾರ್ಪಟ್ಟಿದೆ.

ಮಳೆಯಾದರೂ ಪ್ರಯೋಜನವಿಲ್ಲ: ಜಿಲ್ಲೆಯ ಭತ್ತದ ಕಣಜವಾದ ಬನವಾಸಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದೆ. ಆದರೆ, ಗದ್ದೆಗಳಲ್ಲಿ ಕೆಲಸ ಮಾಡಲಾಗದ ಸ್ಥಿತಿ ನಿರ್ವಣವಾಗಿದೆ. ಹೋಬಳಿಯ ಬಹುತೇಕ ಗ್ರಾಮಗಳನ್ನು ಕಂಟೇನ್ಮೆಂಟ್ ಪ್ರದೇಶ ಮಾಡಲಾಗಿದೆ. ಇದರಿಂದ ಮನೆಯಿಂದ ಗದ್ದೆಗೆ ತೆರಳಲಾಗುತ್ತಿಲ್ಲ. ಪ್ರಸ್ತುತ ಭೂಮಿ ಹದಗೊಳಿಸಿ, ಗೊಬ್ಬರ ಹಾಕಬೇಕಿತ್ತಾದರೂ, ಇನ್ನೂ ಗೊಬ್ಬರ ಖರೀದಿಯೇ ಆಗಿಲ್ಲ. ನಗರ ಪ್ರದೇಶಕ್ಕೆ ಹೋಗಲೂ ಸಮಸ್ಯೆ ಆಗುತ್ತಿರುವ ಕಾರಣ ಈ ಭಾಗದ ಬಹುತೇಕ ಕೃಷಿಕರು ಕೃಷಿ ಚಟುವಟಿಕೆಯನ್ನೇ ನಿಲ್ಲಿಸಿದ್ದಾರೆ.

ಬೀಜ ವಿತರಣೆ: ಉತ್ತಮ ಮಳೆಯಾದ ಕಾರಣ ಕೃಷಿ ಇಲಾಖೆ ಬೀಜ ವಿತರಣೆಗೆ ಮುಂದಾಗಿದೆ. ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ 464 ಕ್ವಿಂಟಾಲ್ ಭತ್ತ ಹಾಗೂ 30 ಕ್ವಿಂ. ಮುಸುಕಿನ ಜೋಳದ ಬೀಜ ದಾಸ್ತಾನು ಮಾಡಲಾಗಿದೆ. ಬನವಾಸಿ ರೈತ ಸಂಪರ್ಕ ಕೇಂದ್ರದಲ್ಲಿ ಅಭಿಲಾಷಾ 90 ಕ್ವಿಂಟಾಲ್, ಜಯಾ 60 ಕ್ವಿಂಟಾಲ್, ಎಂಟಿಯು 1010 - 65 ಕ್ವಿಂಟಾಲ್, ಎಂಟಿಯು 1001- 210 ಕ್ವಿಂಟಾಲ್ ಭತ್ತ ಬೀಜ ದಾಸ್ತಾನಿದೆ. 30 ಕ್ವಿಂಟಾಲ್ ಮುಸುಕಿನ ಜೋಳದ ಬೀಜ ಸಂಗ್ರಹವಿದೆ. ಶಿರಸಿ ರೈತ ಸಂಪರ್ಕ ಕೇಂದ್ರದಲ್ಲಿ ಜಯಾ 5 ಕ್ವಿಂಟಾಲ್, ಎಂಟಿಯು 1010- 10 ಕ್ವಿಂಟಾಲ್, ಎಂಟಿಯು 1001-20 ಕ್ವಿಂಟಾಲ್, ಬಿಪಿಟಿ ಸೋನಾ 4 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನಿದೆ. ಆದರೆ ಹೆಚ್ಚಿನ ರೈತರು ಬೀಜ ಖರೀದಿಗೂ ನಿರಾಸಕ್ತಿ ತೋರುತ್ತಿದ್ದು, ಕೆಲವೇ ರೈತರು ಮಾತ್ರ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಕೃಷಿ ಕಾರ್ಯಕ್ಕೆ ವೇಗ ಸಿಗಬೇಕಾಗಿತ್ತು. ಆದರೆ, ಕರೊನಾ ಕಾರಣಕ್ಕೆ ಗ್ರಾಮೀಣ ಭಾಗದ ಹಲವು ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶಗಳೆಂದು ಘೊಷಿಸಲಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ಕಷ್ಟವಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಬೀಜ ಖರೀದಿ, ಗೊಬ್ಬರ ಖರೀದಿ ಮಾಡಲು ಆಗುತ್ತಿಲ್ಲ. ಸದ್ಯ ಕೃಷಿ ಚಟುವಟಿಕೆ ಬಂದ್ ಇಡಲಾಗಿದೆ.| ಬಸವರಾಜ ಗೌಡ ಬನವಾಸಿ ಕೃಷಿಕ

ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಹೀಗಾಗಿ ಕೃಷಿ ಇಲಾಖೆಯಿಂದ ಬೀಜ ವಿತರಣೆಗೆ ಕ್ರಮವಹಿಸಲಾಗಿದೆ. ಕರೊನಾ ನಡುವೆ ರೈತರು ಕೋವಿಡ್ ನಿಯಮಾವಳಿ ಅನುಸರಿಸಿ ಕೃಷಿಯಲ್ಲಿ ತೊಡಗಬಹುದಾಗಿದೆ.| ಮಧುಕರ ನಾಯ್ಕಕೃಷಿ ಇಲಾಖೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net