

ಹಿರೇಕೆರೂರ: ಭಾರತ ಕೃಷಿ ಪ್ರಧಾನ ದೇಶ ಭಾರತೀಯ ರೈತರ ಹಿತ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯ. ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ರೈತರ ಸ್ವಾವಲಂಬಿ ಜೀವನದಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಸಿಇಎಸ್ ವಿದ್ಯಾಸೌಧ ಶಾಂತಿನಿಕೇತನದಲ್ಲಿ ಇಪ್ಕೋ ಹಾಗೂ ಟಿಎಪಿಸಿಎಂಎಸ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಹಕಾರಿ ಮಾರಾಟಗಾರರ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಹಾಗೂ ರೈತರು ಆರ್ಥಿಕ, ಸಾಮಾಜಿಕವಾಗಿ ಮುಂದುವರಿಯಲು ಮತ್ತು ಜೀವನವನ್ನು ನಡೆಸಲು ಸಹಕಾರಿ ಸಂಘಗಳು ರೈತರಿಗೆ ಆಧಾರ ಸ್ತಂಭವಾಗಿದೆ. ಸರ್ಕಾರ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಅತ್ಯಂತ ಮಹತ್ವದ ಯೋಜನೆಗಳನ್ನು ರೂಪಿಸಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪನ್ಣನವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಏಕೇಶ ಬಣಕಾರ, ಮಹೇಂದ್ರ ಬಡಳ್ಳಿ, ರವಿಶಂಕರ ಬಾಳಿಕಾಯಿ, ನಾಗರಾಜ ಕರಿಗಾರ, ಮಂಜುಳಾ ಬಾಳಿಕಾಯಿ, ಯು.ಎಸ್. ಕಳಗೊಂಡ, ಎನ್.ಎಸ್. ಕಮ್ಮಾರ, ರಾಮು ಮುರಡೇಶ್ವರ, ರಮೇಶ ಕೋಡಿಹಳ್ಳಿ, ಶಂಭು ಗೂಳಪ್ಪನವರ, ಎಂ.ಎಸ್. ಕೋರಿಗೌಡ್ರ ಇತರರು ಇದ್ದರು. ಪ್ರಾಚಾರ್ಯ ಡಾ.ಎಸ್.ಬಿ.ಚನ್ನಗೌಡರ, ದೈಹಿಕ ಶಿಕ್ಷಣ ಶಿಕ್ಷಕ ರಾಜು ಕರೇಗೌಡರ ನಿರ್ವಹಿಸಿದರು.
ರಸಪೂರಿತ ಗೊಬ್ಬರ ಸಾವಯವ ಗೊಬ್ಬರ ನೀಡುವಲ್ಲಿ ನಮ್ಮ ಸಂಸ್ಥೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಎಲ್ಲ ಕಾರ್ಯಗಳ ಮೂಲಕ ರೈತರ ಹಾಗೂ ರೈತ ಕುಟುಂಬಗಳನ್ನು ಕಾಪಾಡುವುದು ನಮ್ಮ ಸಂಸ್ಥೆಯ ಆದ್ಯ ಕರ್ತವ್ಯ.| ಡಾ.ನಾರಾಯಣಸ್ವಾಮಿ. ಸಿ., ಇಪ್ಕೋ ರಸಗೊಬ್ಬರ ಮಾರಾಟ ವ್ಯವಸ್ಥಾಪಕ