

ಲಿಂಗಸುಗೂರು: ಕೃಷಿ ಅಧಿಕಾರಿ ನೇಮಕಕ್ಕೆ ಒತ್ತಾಯಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಸ್ಥಳೀಯ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಅಮರೇಗೌಡಗೆ ಸೋಮವಾರ ಮನವಿ ಸಲ್ಲಿಸಿದರು.
ಮಸ್ಕಿ ತಾಲೂಕಿನಲ್ಲಿ ಕೃಷಿ ಇಲಾಖೆ ಅಧಿಕಾರಿಯಿಲ್ಲದೆ ಅಲ್ಲಿನ ಸಿಬ್ಬಂದಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತರ ಕೃಷಿ ಉಪಕರಣಗಳನ್ನು ಹಂಚಿಕೆ ಮಾಡುತ್ತಿಲ್ಲ. ಕೇಳಿದರೆ ಕೃಷಿ ಅಧಿಕಾರಿ ನೇಮಕವಾಗಬೇಕೆಂದು ಹೇಳುತ್ತಿದ್ದಾರೆ.
ಈಗಾಗಲೇ ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಬಿತ್ತನೆ ಬೀಜ-ರಸಗೊಬ್ಬರ ಸಿಗದೆ ರೈತರಿಗೆ ತೊಂದರೆಯಾಗಿದೆ. ಶೇಂಗಾ, ಸಜ್ಜೆ, ತೊಗರಿ, ಸೂರ್ಯಕಾಂತಿ ಬೀಜಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಇದಕ್ಕೆ ತಕ್ಷಣೆ ತಡೆಯೊಡ್ಡಬೇಕು. ಶೀಘ್ರ ಕೃಷಿ ಅಧಿಕಾರಿ ನೇಮಿಸಿ ಸೌಲಭ್ಯಗಳ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಮಸ್ಕಿ ತಾಲೂಕು ಕಾರ್ಯಾಧ್ಯಕ್ಷ ಶರಣಪ್ಪ ಕುಣಿಕಲ್ಲೂರು, ಮುಖಂಡರಾದ ಮಲ್ಲಪ್ಪ, ಬಸವರಾಜ, ಹನುಮಂತ, ಸಿದ್ದಪ್ಪ, ಮಹ್ಮದ್ ಖಾಜಾಸಾಬ್ ಇತರರಿದ್ದರು.