

ಚನ್ನರಾಯಪಟ್ಟಣ: ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲರಾದ ಬಿ.ಎಂ.ಭಾರತಿ ಗುತ್ತಿಗಾರು ಹೇಳಿದರು.
ಪಟ್ಟಣದ ಪುಷ್ಪಗಿರಿ ಕನ್ವೆನ್ಷನ್ ಸಭಾಂಗಣದಲ್ಲಿ ಶನಿವಾರ ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಸನ್ ರೈಸ್ ಆಯೋಜಿಸಿದ್ದ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಸುಮಾರು 40 ಜನ ಅರ್ಹ ಫಲಾನುಭವಿಗಳಿಗೆ ಯಶಸ್ವಿಯಾಗಿ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಕಾಲಿಲ್ಲದೆ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳನ್ನು ಗುರಿತಿಸಿ ಉತ್ತಮ ಗುಣಮಟ್ಟದ ಕೃತಕ ಕಾಲಿನ ಜೋಡಣೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಪ್ರಸ್ತುತ ವರ್ಷದ ಬಹು ಮುಖ್ಯ ಯೋಜನೆ ಇದಾಗಿದ್ದು ಅಂದಾಜು ಸುಮಾರು 15 ಲಕ್ಷ ರೂ. ವೆಚ್ಚ ತಗಲುವುದು. ಇನ್ನುಳಿದ 60 ಜನರಿಗೆ ಮುಂದಿನ ದಿನಗಳಲ್ಲಿ ಅಳವಡಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದೆ. ಜಿಲ್ಲಾ ಶ್ರೇಯಾಂಕದಲ್ಲಿ ಕ್ಲಬ್ 5ನೇ ಸ್ಥಾನಕ್ಕೇರಿದೆ. ಇದಕ್ಕೆ ಚಾರ್ಟರ್ ಅಧ್ಯಕ್ಷ ಡಾ.ವಿ.ಮಹೇಶ್ ಹಾಗೂ ಅಧ್ಯಕ್ಷ ಎ.ಗಿರೀಶ್ ನೇತೃತ್ವದ ಸದಸ್ಯರ ಸಾಮೂಹಿಕ ಪ್ರಯತ್ನವೇ ಕಾರಣ ಎಂದು ಶ್ಲಾಘಿಸಿದರು.
ಅಧ್ಯಕ್ಷ ಡಾ.ವಿ.ಮಹೇಶ್, ಎ.ಗಿರೀಶ್ ಮಾತನಾಡಿದರು. ಕಾರ್ಯದರ್ಶಿ ಜೆ.ಸಿ.ಗೋವಿಂದರಾಜು ಕ್ಲಬ್‌ನ ವಾರ್ಷಿಕ ವರದಿ ವಾಚಿಸಿದರು. 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪಿ.ಬಿ. ಧನ್ಯಶ್ರೀ ಮತ್ತು ಪಾಲಕರನ್ನು ಸನ್ಮಾನಿಸಲಾಯಿತು. ಸಹಾಯಕ ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರೇಗೌಡ, ಪ್ರಾಂತೀಯ ಅಧ್ಯಕ್ಷ ನಾಗರಾಜ್, ಖಜಾಂಚಿ ಡಿ.ಕೆ.ಮಂಜುನಾಥ್, ವಲಯ ಅಧ್ಯಕ್ಷೆ ರೂಪಾ, ಶ್ವೇತಾ ಆನಂದ್, ಅಣತಿ ಆನಂದ್, ವೆಂಕಟೇಶ್ ಹೆಬ್ಬಾರ್, ತಿಮ್ಮಶೆಟ್ರು, ಡಾ.ಯುವರಾಜ್, ರಂಗಸ್ವಾಮಿ, ಕೆ.ಆರ್.ಉಮೇಶ್ ಬಾಬು, ನಂಜುಂಡೇಗೌಡ, ಪರಮೇಶ್, ಅಶೋಕ್, ಗುರುಮೂರ್ತಿ, ತೊಪೇಗೌಡ, ಜಗದೀಶ್, ಚಂದ್ರು, ಕಾಂತರಾಜು, ಕೆಇಬಿ ಗಿರೀಶ್, ಕುಮಾರ್, ತಿಮ್ಮಪ್ಪಯ್ಯ ಭಾಗವಹಿಸಿದ್ದರು.