

ಬ್ಯಾಡಗಿ: ತಾಲೂಕಿನ ಅಂಗರಗಟ್ಟಿ ಗ್ರಾಮ ಸೇರಿದಂತೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಕೂಲಿ ಹಣ ಜಮೆಯಾಗದೆ ಕೂಲಿಕಾರರು ಪರದಾಡುತ್ತಿದ್ದಾರೆ. ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳಿಂದ ಪರಿಹಾರ ಹಣ ಕೊಡಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರ್ವಿುಕರ ಸಂಘಟನೆ ಕಾರ್ಯಕರ್ತರು ತಾ.ಪಂ. ವ್ಯವಸ್ಥಾಪಕ ಪ್ರಕಾಶ ಹಿರೇಮಠ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ರಾಜು ಆಲದಹಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಕಾರ್ವಿುಕರಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಆಗುತ್ತಿದೆ. ಇಂಜಿನಿಯರ್, ಪಿಡಿಒ ಇತರ ಸಮಸ್ಯೆಗಳಿಂದ ಕೂಲಿಕಾರರು ತೀವ್ರ ತೊಂದರೆ ಅನುಭವಿಸಬೇಕಿದೆ. 150 ದಿನ ಕೂಲಿ ನೀಡುವ ಆದೇಶ ಜಾರಿಗೊಂಡಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿಗೆ ಕೂಲಿಕಾರರು ಕಚೇರಿಗಳಿಗೆ ಅಲೆದಾಡುವ ದುಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗರಗಟ್ಟಿ ಗ್ರಾಮದ ಹಳ್ಳದ ಕಾಲುವೆ ಕಾಮಗಾರಿಯನ್ನು ಜೂನ್ನಲ್ಲಿ ಕೈಗೊಂಡಿರುವ ಕೂಲಿ ಕಾರ್ವಿುಕರಿಗೆ ಈವರೆಗೂ ಹಣ ಜಮೆಯಾಗಿಲ್ಲ. ಈ ಕುರಿತು ಜಿಪಂ ಸಿಇಒಗೆ ಮನವಿ ಪತ್ರ ಕೊಡಲಾಗಿದೆ. 3 ತಿಂಗಳ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳಿಂದ ನಮಗೆ ಕೂಲಿ ಹಣ ಹಾಗೂ ಪರಿಹಾರ ಹಣ ಕೊಡಿಸಿ, ಇಲ್ಲವಾದರೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
100 ದಿನ ಕೂಲಿ ದಿನಗಳನ್ನು ಪೂರೈಸಿದ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಕಾರ್ವಿುಕ ಇಲಾಖೆ ನೀಡುವ ಗುರುತಿನ ಚೀಟಿ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ, ನೂರಾರು ಜನ ಕಾರ್ಡ್ಗೆ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಬೆರಳಣಿಕೆಯಷ್ಟು ಕಾರ್ವಿುಕರಿಗೆ ಮಾತ್ರ ವಿತರಿಸಿದ್ದು, ಉಳಿದವರಿಗೆ ಅಲೆದಾಡಿಸುತ್ತಿದ್ದಾರೆ. ಕಾರ್ವಿುಕ ಇಲಾಖೆ ನಿರೀಕ್ಷಕರು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಕೂಡಲೆ ತಾಲೂಕಿಗೊಬ್ಬ ಕಾರ್ವಿುಕ ನಿರೀಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಸುರೇಶ ತಿಮ್ಮಜ್ಜಿ, ರಾಜು ಅಂಬ್ಲೇಪ್ಪನವರ, ಮಂಜಪ್ಪ ಕರಿಯಣ್ಣನವರ, ಈರಪ್ಪ ಮಾಳಗಿ, ಗದಿಗೆಪ್ಪ ಹುಣಸಿಕಟ್ಟಿ, ದಾದಾಪೀರ ತಿಳವಳ್ಳಿ ಇತರರಿದ್ದರು.