ಕುಷ್ಟರೋಗ ಮುಕ್ತ ಭಾರತ ನಿರ್ವಣಕ್ಕೆ ಶ್ರಮಿಸಿ

30-hvr-10
Published on

ಹಾವೇರಿ: ಗಾಂಧೀಜಿ ಕನಸಾದ ಕುಷ್ಟರೋಗ ಮುಕ್ತ ಭಾರತ ನಿರ್ವಿುಸಲು ಎಲ್ಲರೂ ಶ್ರಮಿಸಬೇಕು. ಕುಷ್ಟರೋಗಿಯು ಸಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ಜೀವನ ನಡೆಸಬಹುದು ಎಂದು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ, ಜಿಲ್ಲಾ ಕುಷ್ಟರೋಗ ನಿಮೂಲನಾಧಿಕಾರಿಗಳ ಕಚೇರಿ, ವಾರ್ತಾ ಇಲಾಖೆ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಷ ಕುಷ್ಟರೋಗ ಅರಿವು ಆಂದೋಲನೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ತಾಲೂಕು ಹಾಗೂ ಗ್ರಾಪಂಗಳಲ್ಲಿ ಬ್ಯಾನರ್ಸ್, ಕರಪತ್ರ, ಗೋಡೆ ಬರಹಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಮಾಜದಲ್ಲಿ ಕುಷ್ಟರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕುಷ್ಠರೋಗ ನಿಮೂಲನಾ ಅಧಿಕಾರಿ ಡಾ. ಚನ್ನಬಸಯ್ಯ ವಿರಕ್ತಮಠ ಮಾತನಾಡಿ, ಕುಷ್ಟರೋಗವು ಭಯಾನಕವಲ್ಲ. ಮೈಕ್ರೋಬ್ಯಾಕ್ಟೀರಿಯಾದಿಂದ ಬರುವಂತಹ ಕಾಯಿಲೆಯಾಗಿದ್ದು, ಗಾಳಿಯ ಮೂಲಕ ಹರಡುತ್ತದೆ. ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಅಂಗವಿಕಲತೆಯನ್ನು ತಡೆಗಟ್ಟಬಹುದು ಎಂದರು.

ಜಾಥಾದಲ್ಲಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯಕ, ತಾಲೂಕು ಆರೋಗ್ಯಾಧಿಕಾರಿ ಪ್ರಭಾಕರ ಕುಂದೂರ, ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಜಿಲ್ಲಾ ಕುಷ್ಟರೋಗ ನಿಮೂಲನಾ ಕಚೇರಿ ಸಿಬ್ಬಂದಿ, ಎಎನ್​ಎಂ ತರಬೇತಿ ಕೇಂದ್ರದ ಅಧ್ಯಾಪಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿದ್ದರು.

ಜ.30ರಿಂದ ಫೆ. 13ರವರೆಗೆ ಸ್ಪರ್ಷ ಕುಷ್ಟರೋಗ ಅರಿವು ಆಂದೋಲನ ಆಯೋಜಿಸಲಾಗಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.ಡಾ. ರಾಜೇಂದ್ರ ದೊಡ್ಡಮನಿ, ಡಿಎಚ್​ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net