

ಗುಡಿಬಂಡೆ : ಸತತವಾಗಿ ಸುರಿಯುತ್ತಿರುವ ಹಿಂಗಾರು ಮಳೆಗೆ ಕುಶಾವತಿ ನದಿ ನೀರಿನ ಹರಿವು ಹೆಚ್ಚಾಗಿ ನವಿಲಗುರ್ಕಿ ಬಳಿ ಇರುವ ಮುಖ್ಯರಸ್ತೆ ಕೊಚ್ಚಿ ಹೋಗಿದ್ದು, ಹತ್ತಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ.
ಚಿಕ್ಕಬಳ್ಳಾಪುರದಿಂದ ಮಂಡಿಕಲ್ ಮಾರ್ಗವಾಗಿ ಕಮ್ಮಾಗುಟ್ಟಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಹಾಗೂ ಗುಡಿಬಂಡೆ ತಾಲೂಕಿನ ಹಲವು ಹಳ್ಳಿಗಳ ಮೂಲಕ ಹಾದು ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕುಶಾವತಿ ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣ 4 ಕಿ.ಮೀ. ವ್ಯಾಪ್ತಿಯೊಳಗಿನ ಗ್ರಾಮಗಳಿಗೆ ಹೋಗಬೇಕಾದವರು 20 ಕಿ.ಮೀ. ಸುತ್ತಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾನೈಟ್ ಲಾರಿಗಳಿಂದ ಮೋರಿ ಕುಸಿತ
ದಶಕಗಳಿಂದಲೂ ಕುಶಾವತಿ ನದಿ ನೀರು ಮುಖ್ಯರಸ್ತೆಯ ಮೇಲೆ ಹರಿಯುತ್ತಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ದ್ವಿಚಕ್ರ ವಾಹನಗಳು, ಬಸ್, ಗೂಡ್ಸ್ ವಾಹನಗಳು ಸಂಚರಿಸುತ್ತಿದ್ದರೂ ಕುಸಿಯದ ಮೋರಿ, ಒಂದು ಮಳೆಗೆ ಹೇಗೆ ಕುಸಿಯಲು ಸಾಧ್ಯ. ಈ ಭಾಗದಲ್ಲಿರುವ ಗ್ರಾನೈಟ್ ಕ್ವಾರಿಗಳಿಂದ ಮಿತಿಮೀರಿದ ಭಾರ ಹೊತ್ತು ಸಾಗುವ ಗಣಿಗಾರಿಕೆಯ ಲಾರಿಗಳ ಸಂಚಾರದಿಂದ ಮೋರಿ ಕುಸಿದು ಬಿದ್ದಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಕನಸಾಗಿಯೇ ಸೇತುವೆ ನಿರ್ಮಾಣ
ಕುಶಾವತಿ ನದಿಗೆ ಅಡ್ಡಲಾಗಿ ಶಾಶ್ವತ ಪರಿಹಾರಕ್ಕಾಗಿ ಮೇಲು ಸೇತುವೆ ನಿರ್ಮಿಸಬೇಕೆಂಬ ದಶಕಗಳ ಬೇಡಿಕೆ ಈಡೇರದೆ ಹಾಗೇ ಉಳಿದಿದೆ. ಸ್ಥಳೀಯ ಶಾಸಕ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಸೇತುವೆ ಕನಸು ನನಸಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಂಚಾರಕ್ಕೆ ಪರದಾಟ
ರಸ್ತೆಯ ಮೇಲೆ ನದಿಯ ನೀರು ಹರಿಯುತ್ತಿದೆ. ಆದರೆ, ಸೇತುವೆ ನಿರ್ಮಾಣವಾಗಿಲ್ಲ, ಕನಿಷ್ಠ ಪಕ್ಷ ರಸ್ತೆಯ ಎರಡೂ ಬದಿ ತಡೆಗೋಡೆ ನಿರ್ಮಾಣಕ್ಕೂ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡದಿರುವುದರಿಂದ ಮಳೆಗಾಲದಲ್ಲಿ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರು ಪರದಾಡುವಂತಾಗಿದೆ.