ಕುವೈತ್​ನಲ್ಲಿ ಭಾರತೀಯನಿಗೆ ಕಿರುಕುಳ

29bkl1
Published on

ಭಟ್ಕಳ: ಕುವೈತ್​ನಲ್ಲಿ ಉದ್ಯೋಗಕ್ಕೆ ತೆರಳಿದ್ದ ಹೊನ್ನಾವರ ಮೂಲದ ವ್ಯಕ್ತಿಯೊಬ್ಬರು ಅಲ್ಲಿನ ಮಾಲೀಕರ ಕಿರುಕುಳದಿಂದ ಬೇಸತ್ತು ಊರಿಗೆ ಮರಳಲಾಗದ ಸ್ಥಿತಿಯಲ್ಲಿದ್ದಾಗ ಅವರನ್ನು ಏಮ್ ಇಂಡಿಯಾ ಫೋರಂ ಸಂಸ್ಥೆಯ ಸದಸ್ಯರು ರಕ್ಷಿಸಿದ್ದಾರೆ.

ಹೊನ್ನಾವರ ಮೂಲದ ಮಂಕಿಯ ಸುಕ್ರಾಂತ್ ಪಿಂಟೋ ಮನೆಯ ಅಡುಗೆ ಕೆಲಸಕ್ಕೆಂದು ಕುವೈತ್​ಗೆ ಹೋಗಿದ್ದರು. ಅಲ್ಲಿ ಅತಿಯಾದ ಕೆಲಸ, ಮಾಲೀಕನ ಕಿರುಕುಳದಿಂದ ದೈಹಿಕವಾಗಿ ಬಳಲಿ ಚರ್ಮ ವ್ಯಾದಿಗೆ ತುತ್ತಾಗಿದ್ದರು. ಕಷ್ಟ ಹೇಳಿಕೊಂಡರೂ ಸ್ಪಂದಿಸದ ಮಾಲೀಕರ ವಿರುದ್ಧ ಏಮ್ ಇಂಡಿಯಾ ಪೋರಂ ಅಧ್ಯಕ್ಷ ಭಟ್ಕಳ ತಾಲೂಕಿನ ಶಿರಾಲಿ ಮೂಲದ ಡಾ. ಶಿರಾಲಿ ಶೇಖ್ ಮುಜಫರ್ ಅವರ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಡಾ. ಶಿರಾಲಿ ಶೇಖ್ ಮುಜಫರ್, ಪ್ರಧಾನ ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ ಮೂಲಕ ಸಂತ್ರಸ್ತ ಭಾರತೀಯ ನಾಗರಿಕನ ಎಲ್ಲ ಮಾಹಿತಿ ಸಂಗ್ರಹಿಸಿ, ಜೂನ್ 25ರಂದು ಕುವೈತ್​ನಲ್ಲಿರುವ ಭಾರತದ ರಾಯಭಾರಿ ಸಿಬಿ ಜಾರ್ಜ್ ಅವರನ್ನು ಸಂರ್ಪಸಿದ್ದರು.

ಕುವೈತ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಸುಕ್ರಾಂತ್​ನನ್ನು ಸಂರ್ಪಸಿ ರಾಯಭಾರ ಕಚೇರಿಯಲ್ಲಿ ಆಸರೆ ನೀಡದ್ದರು. ಏಮ್ ಇಂಡಿಯಾ ಫೋರಂ ಮತ್ತು ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ಸುಕ್ರಾಂತ್ ತನ್ನ ಉದ್ಯೋಗದಾತನ ದೌರ್ಜನ್ಯದ ವಿರುದ್ಧ, ಕುವೈತ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. 2022ರ ಜುಲೈ 4ರಂದು ಕುವೈತ್ ಲೇಬರ್ ಕೋರ್ಟ್ ಸುಕ್ರಾಂತ್ ಪರವಾಗಿ ತೀರ್ಪು ನೀಡಿ, ಈತನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಿಂದಿರುಗಿಸುವಂತೆ ಆದೇಶಿಸಿದೆ. ಜತೆಗೆ ಮಾಲೀಕನಿಗೆ ಶಿಕ್ಷೆಯ ರೂಪದಲ್ಲಿ ದಂಡ ವಿಧಿಸಿದೆ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಸುಕ್ರಾಂತ್ ಭಾರತೀಯ ರಾಯಭಾರ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ ಸಹಾಯದಿಂದ ಭಾರತಕ್ಕೆ ಬಂದು ತನ್ನ ಬಳಗ ಸೇರಿಕೊಂಡಿದ್ದಾರೆ.

2021ರ ಫೆಬ್ರವರಿ 24ರಂದು ಅಡುಗೆ ಕೆಲಸಕ್ಕೆಂದು ಕುವೈತ್​ಗೆ ತೆರಳಿದ್ದೆ. ನಿಗದಿತ ಉದ್ಯೋಗದ ಹೊರತು ಮನೆ ಹಾಗೂ ಉದ್ಯಾನದ ಸ್ವಚ್ಛತೆ, ಲೋಡಿಂಗ್-ಅನ್​ಲೋಡಿಂಗ್​ನಂತಹ ಭಾರವಾದ ಕೆಲಸ ನೀಡಲು ಆರಂಭಿಸಿದ್ದರು. ಚರ್ಮ ರೋಗ ಸಂಪೂರ್ಣ ಶರೀರಕ್ಕೆ ವ್ಯಾಪಿಸಿದರೂ ಚಿಕಿತ್ಸೆ ಕೊಡಿಸಲಿಲ್ಲ. ಪರಿವಾರದವರಿಗೆ ವಿಷಯ ತಿಳಿಸಿದ ಬಳಿಕ, ಏಮ್ ಇಂಡಿಯಾ ಫೋರಂ ಸಂಸ್ಥೆಯ ಸಹಾಯದಿಂದ ಭಾರತಕ್ಕೆ ಮರಳುವಂತಾಯಿತು. | ಸುಕ್ರಾಂತ್ ಪಿಂಟೋ, ಭಾರತಕ್ಕೆ ಮರಳಿದ ಮಂಕಿಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net