ಕುಳಗೇರಿ ಕ್ರಾಸ್‌ನಲ್ಲಿ ಸರಣಿ ಕಳ್ಳತನ

bkt-25-11-a
ಕುಳಗೇರಿ ಕ್ರಾಸ್‌ನಲ್ಲಿ ಸರಣಿ ಮನೆ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ವಾನದಳದೊಂದಿಗೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದರು.
Published on

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಮನೆಗಳ ಸರಣಿ ಕಳ್ಳತನ ನಡೆದಿದೆ. ಮುಖಕ್ಕೆ ಮುಸುಕು ಹಾಕಿಕೊಂಡು ಕೈಯಲ್ಲಿ ಕಬ್ಬಿಣದ ರಾಡ್ ಹಾಗೂ ಟಾರ್ಚ್ ಹಿಡಿದುಕೊಂಡು ಬಂದಿದ್ದ ಕಳ್ಳರು ನಾಲ್ಕು ಮನೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಶುಕ್ರವಾರ ತಡರಾತ್ರಿ ನಾಲ್ವರು ಇದ್ದ ಕಳ್ಳರ ಗುಂಪು ಬಿಂದಾಸ್ ಆಗಿ ಕಳ್ಳತನಕ್ಕೆ ನುಗ್ಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳತನ ನಡೆದಿರುವ ಸ್ಥಳಕ್ಕೆ ಶನಿವಾರ ಬೆಳಗ್ಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿ ಆಗಿದ್ದು, ಕೈಯಲ್ಲಿ ಮಾರಕಾಸöಗಳನ್ನು ಹಿಡಿದುಕೊಂಡು ಕಳ್ಳರು ಬರುತ್ತಿರುವುದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಅನೇಕ ಕಳ್ಳತನ ಪ್ರಕರಣಗಳು ನಡೆದರೂ ಜನರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.

ಇದೀಗ ಕುಳಗೇರಿ ಕ್ರಾಸ್‌ನಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರಿಗೆ ಎರಡು ಮನೆಗಳಲ್ಲಿ ನಗದು ಹಾಗೂ ಚಿನ್ನಾಭರಣಗಳು ಸಿಕ್ಕಿದ್ದು, ಇನ್ನೆರಡು ಮನೆಗಳಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಸರಣಿ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಭಾನುವಾರ ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಹ ಭೇಟಿ ನೀಡಿ, ಪರಿಶೀಲಿಸಿದ್ದು, ಇದೀಗ ಕಳ್ಳರ ಗ್ಯಾಂಗ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net