ಕುರಿದೊಡ್ಡಿಯಾದ ವೆಟರ್ನರಿ ಆಸ್ಪತ್ರೆ

FotoJet (1)
Published on

ಭೂಮಿಶೆಟ್ಟಿಹಳ್ಳಿಯಲ್ಲಿ ನೂತನ ಕಟ್ಟಡದ ಅವ್ಯವಸ್ಥೆ | ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯವಿಲ್ಲ

 ಚಿಂತಾಮಣಿ : ತಾಲೂಕಿನ ಭೂಮಿಶೆಟ್ಟಿಹಳ್ಳಿ ಪಂಚಾಯಿತಿ ಕೇಂದ್ರದಲ್ಲಿರುವ ಪಶು ವೈದ್ಯಕೀಯ ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸಂಬಂಧಪಟ್ಟ ಇಲಾಖೆ ಗಮನಹರಿಸದ ಕಾರಣ ಕಟ್ಟಡದ ಆವರಣದಲ್ಲಿ ಗಿಡಗಂಟಿಗಳು ಬೆಳೆದಿರುವುದಲ್ಲದೇ, ಸ್ಥಳೀಯರು ಕಟ್ಟಡವನ್ನು ಕುರಿದೊಡ್ಡಿಯನ್ನಾಗಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಆರ್‌ಐಡಿಎಫ್-20ರ ಯೋಜನೆಯಡಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್) ವತಿಯಿಂದ ನಿರ್ಮಾಣ ಮಾಡಿರುವ ಕಟ್ಟದ ಬಳಕೆಗೆ ಬಾರದೆ ಪಾಳು ಬಿದ್ದಿದೆ. ಕಾಮಗಾರಿ ಮುಗಿಸಿದಾಕ್ಷಣ ಗುತ್ತಿಗೆದಾರರು ಕಟ್ಟಡವನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಬೇಕು. ಇಲಾಖೆ ಕೂಡ ಕಟ್ಟಡ ಉದ್ಘಾಟನೆ ಮಾಡಿ ಸಾರ್ವಜನಿಕ ಸೇವೆಗೆ ಬಳಕೆ ಮಾಡುವುದು ಕಡ್ಡಾಯವಾಗಿದೆ. ಆದರೆ, ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿ ನಿರ್ಮಿಸಿದ ಕಟ್ಟಡ ಮಾತ್ರ ಸಾರ್ವಜನಿಕ ಬಳಕೆಗೆ ಬಾರದೆ ಕುರಿ ಶೆಡ್ ಆಗಿ ಬಳಕೆಯಾಗುತ್ತಿರುವುದು ಸರ್ಕಾರಿ ಆಡಳಿತದ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಕಟ್ಟಡ ನಿರ್ಮಾಣ ಕುರಿತಂತೆ ಸಂಬಂಧಪಟ್ಟ ಪಶು ವೈದ್ಯಾಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲವಾಗಿದೆ. ಚುನಾಯಿತ ಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವುದು ಅನಿವಾರ್ಯವಾಗಿದೆ. ಪಶು ವೈದ್ಯಕೀಯ ಕೇಂದ್ರವನ್ನು ಸ್ವಚ್ಛಗೊಳಿಸಿ, ಪಶುವೈದ್ಯರನ್ನು ನೇಮಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಮೂಲಕ ಕಟ್ಟಡ ಸದ್ಬಳಕೆಯಾಗಬೇಕು ಎನ್ನುವುದು ಸ್ಥಳೀಯರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net