ವಿಜಯವಾಣಿ ಸುದ್ದಿಜಾಲ ಕಾರವಾರ
ಕುಮಟಾದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್‌ನೊಟ್ಟಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಆಗಸ್ಟ್ 15 ರ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಬಂದು ಅದನ್ನು ಘೋಷಿಸುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಪಂ ಸಭಾಭವನದಲ್ಲಿ ಸೋಮವಾರ ಅವರು ತ್ರೆಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಪಟ್ಟಣದಲ್ಲಿ 17.5 ಎಕರೆ ಸರ್ಕಾರಿ ಪಡಾ ಜಾಗವನ್ನು ಈಗಾಗಲೇ ಮೀಸಲಿಡಲಾಗಿದೆ. ಮೆಡಿಕಲ್ ಕಾಲೇಜ್‌ನೊಟ್ಟಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಕನಿಷ್ಠ 25 ಎಕರೆ ಜಾಗ ಬೇಕಿದೆ. ಇದರಿಂದ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಸೇರಿದ ಮೂರು ಜಾಗಗಳನ್ನು ಗುರುತಿಸಲಾಗಿದೆ. ಮಣಿಪಾಲದ ಕೆಎಂಸಿ ಹಾಗೂ ಮಂಗಳೂರಿನ ದೇರಳಕಟ್ಟೆ ನಿಟ್ಟೆ, ಕ್ಷೇಮಾ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಒಂದೆರಡು ದಿನದಲ್ಲಿ ಅವರು ಬಂದು ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದರು.
ಅಲ್ಲಿಯವರೆಗೆ ಜಿಲ್ಲೆಯ ಜನರಿಗೆ ಚಿಕಿತ್ಸೆ ನೀಡಲು ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್‌ನಲ್ಲಿ 160 ಕೋಟಿ ವೆಚ್ಚದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಅದರಲ್ಲಿ ಟ್ರಾಮಾ ಸೆಂಟರ್, ಕ್ಯಾನ್ಸರ್ ಸೆಂಟರ್ ಕೂಡ ಸೇರಿದೆ. ಅಲ್ಲದೆ, ಹೆಚ್ಚುವರಿಯಾಗಿ ಕೇಂದ್ರ ಸರ್ಕಾರದಿಂದ 50 ಹಾಸಿಗೆಗಳ ತುರ್ತು ಚಿಕಿತ್ಸಾ ಕೇಂದ್ರ ಮಂಜೂರಾಗಿದ್ದು, ಅದನ್ನು ಅಂಕೋಲಾದ ಹಟ್ಟಿಕೇರಿಯಲ್ಲಿ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ ಎಂದರು.