

ಕೆ.ಆರ್.ನಗರ: ಮುಂದಿನ 30 ವರ್ಷಗಳವರೆಗೆ ಕೆ.ಆರ್.ನಗರ ಪಟ್ಟಣಕ್ಕೆ ಯಾವುದೇ ನೀರಿನ ಸಮಸ್ಯೆ ಬಾರದಂತೆ ಅಮೃತ್- 2.0 ಯೋಜನೆ ಅಡಿ 30 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ಪಟ್ಟಣದ ವರವಲಯದಲ್ಲಿರುವ ಹಳೇ ಎಡತೊರೆಯ ಕಾವೇರಿ ನದಿ ಬಳಿ ಇರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ನೀರು ಶುದ್ಧೀಕರಣ ಘಟಕದ ಬಳಿ ಅಮೃತ್ 2.0 ಅಡಿಯಲ್ಲಿ ಕೆ.ಆರ್.ನಗರ ಪಟ್ಟಣಕ್ಕೆ ನೀರು ಸರಬರಾಜಿಗೆ ವ್ಯವಸ್ಥೆಯ ಕಲ್ಪಿಸಲು 30.15 ಕೋಟಿ ರೂ. ಯೋಜನೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕೆ.ಆರ್.ನಗರ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಪಟ್ಟಣದ ಜನತೆಗೆ ಕುಡಿಯುವ ನೀರಿನ ಅಭಾವ ಆಗಬಾರದೆಂಬ ಉದ್ದೇಶದಿಂದ ಎಲ್ಲ ಬಡಾವಣೆಗಳಿಗೆ ಕುಡಿಯುವ ನೀರಿನ ಭವಣೆ ನೀಗಿಸಲು ಅಮೃತ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಅಮೃತ ಯೋಜನೆ ಅಡಿಯಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೆೇರಿ ಹಿಂಭಾಗದ ಆವರಣದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್, ಕೆಇಬಿ ಕಚೇರಿ ಆವರಣದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಅಗತ್ಯವಿದ್ದು, 20 ಕೋಟಿ ರೂ.ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಹೆಚ್ಚುವರಿಯಾಗಿ ಪಟ್ಟಣದ ಹೊಸ ಬಡಾವಣೆಗಳಲ್ಲಿ ಅಗತ್ಯ ಇರುವ ಒಳಚರಂಡಿ ಕಾಮಗಾರಿಯ ಸಂಪೂರ್ಣ ಡಿಪಿಆರ್ ಮಾಡಿಸಿ ಕೊಟ್ಟರೆ ನಾನು ಈಗಾಗಲೇ ನಗರಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿದ್ದು, ಅಗತ್ಯ ಅನುದಾನ ಕೊಡಿಸುತ್ತೇನೆ ಎಂದು ಹೇಳಿದರು.
ಪಟ್ಟಣದ ಡಾಕ್ಟರ್ ರಾಜ್ ಕುಮಾರ್ ಬಾನಂಗಳದ ಅಭಿವೃದ್ಧಿ, ಮಹಾತ್ಮ ಗಾಂಧಿ ಉದ್ಯಾನ ಅಭಿವೃದ್ಧಿ, ಬಸವೇಶ್ವರ ಬಡಾವಣೆಯ ಶಿಶುವಿಹಾರ ಮೈದಾನ ಅಭಿವೃದ್ಧಿ ಹಾಗೂ ಮಧುವನಹಳ್ಳಿ ಬಡಾವಣೆಯ ಕೆರೆ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ಅನುದಾನ ಶೀಘ್ರವಾಗಿ ಬಿಡುಗಡೆ ಆಗಲಿದೆ. ಅಲ್ಲದೆ ಪಟ್ಟಣದ ಕಂಠೇನಹಳ್ಳಿ ಬಳಿ ಇರುವ ಕೊಳ ಅಭಿವೃದ್ಧಿಗೆ ಈಗಾಗಲೇ 2.41 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಶೀಘ್ರವಾಗಿ ಎಲ್ಲ ಯೋಜನೆಗಳಿಗೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಪಟ್ಟಣದ ಈಶ್ವರ ನಗರದಲ್ಲಿ ನಮ್ಮ ಕ್ಲಿನಿಕ್ ಚಾಲನೆಯಲ್ಲಿದ್ದು, ಪಟ್ಟಣದ ಜನತೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆಂಜನೇಯ ಬಡಾವಣೆಯ ಗರಡಿ ಮನೆ ಬಳಿ ನಮ್ಮ ಕ್ಲಿನಿಕ್ ತೆರೆಯಲು ಕ್ರಮ ಕೈಗೊಂಡಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ರಾಜ್ಯದಲ್ಲಿಯೇ ಮಾದರಿ ಪಟ್ಟಣವಾಗಿ ಮಾಡಲು ಶ್ರಮಿಸಲಾಗುವುದು ಎಂದರು.
ಪುರಸಭಾ ಅಧ್ಯಕ್ಷ ಶಿವು ನಾಯಕ್ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸದಸ್ಯ ಕೋಳಿ ಪ್ರಕಾಶ್, ಶಂಕರ್ ಸ್ವಾಮಿ, ನಟರಾಜ್, ಮಾಜಿ ಸದಸ್ಯ ವಿನಯ್, ನಗರ ಯೋಜನೆ ಪ್ರಾಧಿಕಾರದ ನಿರ್ದೇಶಕ ಪ್ರಸನ್ನಕುಮಾರ್, ಮುಖಂಡ ಆದರ್ಶ, ಚಿಕ್ಕವೀರು, ವೃಷಭೇಂದ್ರಪ್ಪ, ನವೀದ್, ಗೀತಾಮಹೇಶ್, ಕಾಳಿಕುಮಾರ್ ನಗರ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಇತರರು ಇದ್ದರು.