

ಬಾಗಲಕೋಟೆ: ಬರ ಪರಿಸ್ಥಿತಿ ಹಾಗೂ ಬೇಸಿಗೆ ಸಮರ್ಪಿಸುತ್ತಿರುವ ಹಿನ್ನಲೆಯಲ್ಲಿ ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಮಣ್ಣೆಕಟ್ಟಿ, ಭಗವತಿ, ಹಳ್ಳೂರ ಹಾಗೂ ಬೇವೂರ ಗ್ರಾಮ ಪಂಚಾಯಿತಿಗಳಿಗೆ ಬಾಗಲಕೋಟೆ ತಾಲೂಕಾ ನೋಡಲ್ ಅಧಿಕಾರಿ ಎಸ್.ಎಂ.ಕೋರೆ ಹಾಗೂ ಬಾಗಲಕೋಟೆ ತಹಸೀಲ್ದಾರ ಅಮರೇಶ್ ಪಮ್ಮಾರ ಗುರುವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅಮರೇಶ ಪಮ್ಮಾರ ಮಾತನಾಡಿ, ಕುಡಿಯುವ ನೀರಿಗಾಗಿ ಹಳ್ಳೂರಲ್ಲಿ ಮೂರು ಹಾಗೂ ಭೈರಮಟ್ಟಿಯಲ್ಲಿ ಮೂರು ಕೊಳವೆಬಾವಿಗಳಿದ್ದು, ಬರುವ ಮಾರ್ಚವರೆಗೆ ಕುಡಿಯುವ ನೀರಿನ ಸಮಸ್ಯೆಯಾಗಲಾರದು. ಎಪ್ರಿಲ್, ಮೇ ತಿಂಗಳ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಹಳ್ಳೂರು ಗ್ರಾಮಕ್ಕೆ ಕೆಂಪು ಕೆರೆಯಿಂದ ೧೯೯೬-೯೭ ನೇ ಸಾಲಿನಲ್ಲಿ ನಡೆದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದಾಗಿ ಸಮಸ್ಯೆ ಇಲ್ಲ. ಆದರೇ ಪೈಪಲೈನ ಅಲ್ಲಲ್ಲಿ ದುರಸ್ಥಿತಿ ಇದ್ದು, ಶೀಘ್ರಗತಿಯಲ್ಲಿ ಸರಿಪಡಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವದಿಲ್ಲ. ಒಂದು ವೇಳೆ ನೀರಿನ ಸಮಸ್ಯೆಯಾದಲ್ಲಿ ಹಳ್ಳೂರಲ್ಲಿ ಇಬ್ಬರು ರೈತರ ಖಾಸಗಿ ಬೋರ್ವೆಲ್‌ಗಳಿಂದ ಹಾಗೂ ಭೈರಮಟ್ಟಿಯಿಂದ ಇಬ್ಬರು ರೈತರ ಬೋರ್ವೆಲ್‌ಗಳಿಂದ ನೀರು ಪಡೆಯುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ನೀರಿನ ಸಮಸ್ಯೆ ಉಲ್ಪಣವಾಗುವದಿಲ್ಲ. ಆದರು ಸಹ ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ಎಸ್.ಬಿ.ಶಾಸ್ತ್ರಿ ಹಾಗೂ ಗ್ರಾಪಂ ಕಾರ್ಯದರ್ಶಿ ಬಿ.ಬಿ.ದೇಸಾಯಿ ಉಪಸ್ಥಿತರಿದ್ದರು.