ಕುಡಿಯುವ ನೀರಿಗಾಗಿ ನಿವಾಸಿಗಳ ಅಲೆದಾಟ!

12KMT1
Published on

ಕುಮಟಾ: ಕರೊನಾ ಲಾಕ್​ಡೌನ್​ನಿಂದ ಜನಜೀವನ ಮನೆಯ ಚೌಕಟ್ಟಿನಲ್ಲಿ ಬಂಧಿಯಾಗಿದೆ. ಆದರೆ, ಕುಡಿಯುವ ನೀರಿಗಾಗಿ ಕೇರಿ ದಾಟಿ ಬಾವಿಯಿಂದ ಬಾವಿಗೆ ಅಲೆಯುವ ದುಸ್ಥಿತಿ ಹೊಲನಗದ್ದೆಯ ಜನತಾಪ್ಲಾಟ್ ಹಾಗೂ ಸುತ್ತಲಿನ ನಿವಾಸಿಗಳಿಗೆ ಬಂದೊದಗಿದೆ.

ತಾಲೂಕಿನಲ್ಲಿ ಸಾಮಾನ್ಯವಾಗಿ ನೀರಿನ ತುಟಾಗ್ರತೆಯ ಬಿಸಿ ಒಂದಿಲ್ಲೊಂದು ಕಡೆ ಏಪ್ರಿಲ್ ತಿಂಗಳ ಆರಂಭದಲ್ಲೇ ಶುರುವಾಗಿರುತ್ತದೆ. ಕಳೆದ ವರ್ಷ ಒಟ್ಟು 23 ಪಂಚಾಯಿತಿಯ 70 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ತಾಲೂಕಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸಿತ್ತು. ಪ್ರತಿವರ್ಷ ಟ್ಯಾಂಕರ್ ನೀರೇ ಗತಿ ಎಂಬಂತಾಗಿದೆ. ಆದರೆ, ಈ ಬಾರಿ ಕರೊನಾ ಸೋಂಕಿನ ಭಯದ ಎದುರಿಗೆ ಕುಡಿಯುವ ನೀರಿನ ಸಮಸ್ಯೆ ದೊಡ್ಡದಲ್ಲ ಎಂಬಂತಾಗಿದೆ.

ಮುಖ್ಯವಾಗಿ ಹೊಲನಗದ್ದೆ ಹಾಗೂ ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವೆಡೆ ಬಾವಿಯಲ್ಲಿ ನೀರಿದ್ದರೂ ಅಂತರ್ಜಲ ಕೆಟ್ಟು ಸವುಳು ನೀರಿನ ಸಮಸ್ಯೆ ಕಾಡುತ್ತಿದೆ. ಹೊಲನಗದ್ದೆ ಜನತಾಪ್ಲಾಟ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸವುಳು ನೀರಿನ ಸಮಸ್ಯೆಯ ಜತೆಗೆ ಬಾವಿಗಳೂ ಬತ್ತಿವೆ. ಇಲ್ಲಿನ ಒಂದು ಕೊಳವೆ ಬಾವಿಯಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದೆ. ಇನ್ನೊಂದು ತೆರೆದ ಬಾವಿಯಲ್ಲಿ ತಾಸುಗಟ್ಟಲೆ ಕಾದರೆ ಮಾತ್ರ ನಾಲ್ಕಾರು ಕೊಡ ನೀರು ಸಿಗುತ್ತಿದೆ. ಈ ಬಗ್ಗೆ ಸ್ಥಳೀಯರು ವಿಜಯವಾಣಿಯೊಂದಿಗೆ ಮಾತನಾಡಿ, ಲಾಕ್​ಡೌನ್​ನಿಂದ ನಮ್ಮ ದಿನನಿತ್ಯದ ದಿನಸಿ ಇತರ ಅಗತ್ಯಗಳಿಗೆ ತೊಂದರೆಯಾಗಿಲ್ಲ. ಆದರೆ, ನೀರಿನ ಸಮಸ್ಯೆ ಜೋರಾಗಿದೆ. ಸದ್ಯ ಎಲ್ಲರೂ ಮನೆಯಲ್ಲೇ ಇರುವುದರಿಂದ ನೀರಿನ ಬಳಕೆಯೂ ಹೆಚ್ಚಿದೆ. ವಾರಕ್ಕೊಮ್ಮೆ ಪಂಚಾಯಿತಿಯಿಂದ ಬಿಡುವ ನೀರು ಕೂಡ ಕುಡಿಯುವುದಕ್ಕೆ ಯೋಗ್ಯವಾಗಿಲ್ಲ. ಕೆಲವರು ಹಣ ಕೊಟ್ಟು ನೀರು ಖರೀದಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ತಾಲೂಕಿನ ಹೆಗಡೆ, ಮೂರೂರು, ಬರ್ಗಿ, ಹಿರೇಗುತ್ತಿ, ನಾಡುಮಾಸ್ಕೇರಿ, ಹನೇಹಳ್ಳಿ, ಅಳಕೋಡ ಇತರ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿಯುತ್ತಿದೆ. ತೋಟಗಳಿಗೆ ನೀರು ಸಾಲುತ್ತಿಲ್ಲ. ಪಟ್ಟಣದಲ್ಲಿ ಲಾಕ್​ಡೌನ್​ನಿಂದ ಹೋಟೆಲ್ ಇತರೆಡೆ ಹೆಚ್ಚಿನ ನೀರು ಬಳಕೆಯಾಗುವ ಉದ್ಯಮಗಳು ಬಂದ್ ಇರುವುದರಿಂದ ಹಾಗೂ ಮರಾಕಲ್ ನೀರು ಸರಾಗವಾಗಿ ಹರಿದು ಬರುತ್ತಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಲಿಲ್ಲ. ಮುಂದಿನ ಒಂದೆರಡು ವಾರದಲ್ಲಿ ತಾಲೂಕಿನಲ್ಲಿ ವ್ಯಾಪಕವಾಗಿ ನೀರಿನ ಬರ ಕಾಡಬಹುದು. ಶಾಸಕರು ಹಾಗೂ ತಾಲೂಕಾಡಳಿತ ಮುಂಜಾಗ್ರತೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net