

ಅರಸೀಕೆರೆ: ಕ್ಷೇತ್ರದ ಜನರ ಕುಂದುಕೊರತೆ ಆಲಿಸಲು ಸಭೆ ಕರೆಯುವಂತೆ ಪತ್ರ ನೀಡಿದ್ದರೂ ತಾಲೂಕು ಪಂಚಾಯಿತಿ ಇಒ ನಿರ್ಲಕ್ಷೃ ತೋರಿದ್ದು ಶಾಸಕಾಂಗದ ತಾಕತ್ತು ಏನೆಂಬುದನ್ನು ತೋರಿಸುತ್ತೇನೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ಗುಡುಗಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿದ ಅವರು, ಪೂರ್ವ ನಿಗದಿಯಂತೆ ಸಭೆಗೆ ನಡೆಯಲಿದೆ ಎಂದು ಭಾವಿಸಿದ್ದೆ. ಆದರೆ ಸಮಯ ಮಧ್ಯಾಹ್ನ 1ಗಂಟೆ ಕಳೆದರೂ ತಾಪಂ ಇಒ ಸತೀಶ್ ಗೈರಾಗಿದ್ದಾರೆ. ಅನ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದಿದ್ದಾಗ ನೋಟಿಸ್ ನೀಡುವ ವ್ಯಕ್ತಿ ಇಂದು ನಾಪತ್ತೆಯಾಗಿದ್ದಾರೆ. ಕ್ಷೇತ್ರದ ಜನರು ಸಮಸ್ಯೆ ಹೊತ್ತು ತಂದಿದ್ದ ಜನರು, ಸ್ವಾಮಿ, ನಮಗೆ ರಸ್ತೆ ಸರಿಮಾಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ಸರ್ಕಾರದ ಸವಲತ್ತುಗಳು ಸಕಾಲಕ್ಕೆ ತಲುಪುತ್ತಿಲ್ಲ, ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ. ಎಲ್ಲರ ಸಂಕಷ್ಟಗಳಿಗೆ ಪರಿಹಾರ ಸೂತ್ರ ಕಂಡುಕೊಳ್ಳಬೇಕಾದ ಸಭೆ ಆಯೋಜಿಸದೇ ಕರ್ತವ್ಯ ಲೋಪವೆಸಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ದುರ್ನಡತೆ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ಖದ್ದು ದೂರು ನೀಡಲಿದ್ದೇನೆ. ಶಾಸಕಾಂಗದ ಅಸ್ತಿತ್ವಕ್ಕೆ ಧಕ್ಕೆ ತರಲು ಹೊರಟಿರುವ ಅಧಿಕಾರಿಗೆ ನನ್ನ ಶಕ್ತಿ ಏನೆಂಬುದನ್ನು ಸಾಬೀತು ಮಾಡಲಿದ್ದೇನೆ ಎಂದು ಕಿಡಿಕಾರಿದರು.
ಕ್ಷೇತ್ರದ ಶಾಸಕರು ಸಭೆ ನಡೆಸಲಿದ್ದಾರೆ, ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂದು ದೂರದ ಊರುಗಳಿಂದ ಆಗಮಿಸಿದ್ದ ಹಲವರು ನಿರಾಸೆ ಅನುಭವಿಸಿದರು. ತಾಪಂ ಕಚೇರಿಗೆ ಬೀಗ ಜಡಿಯೋಣ, ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ. ಶಾಸಕರೇ ಗಂಟೆಗಟ್ಟಲೆ ಕಾಯುವ ಸನ್ನಿವೇಶ ನಿರ್ಮಾಣಗೊಂಡಿದ್ದು ಸಾರ್ವಜನಿಕರ ಪಾಡು ಹೇಳತೀರದಂತಾಗಿದೆ. ಹತ್ತಾರು ಸಮಸ್ಯೆ ಹೊತ್ತು ಹಣ ತೆತ್ತು ದಿನವಿಡೀ ಕಾದಿದ್ದು ತಾಪಂ ಇಒ ಸತೀಶ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು. ಜಿಪಂ ಸಿಇಒ ತಕ್ಷಣವೇ ಇತ್ತ ಗಮನಹರಿಸಿ ಕರ್ತವ್ಯ ಲೋಪವೆಸಗಿರುವ ಅಧಿಕಾರಿಯನ್ನು ಅಮಾನತು ಮಾಡಬೇಕು. ಅಲ್ಲಿಯವರೆಗೂ ಆಹೋರಾತ್ರಿ ಧರಣಿ ನಡೆಸೋಣ ಎಂದು ತಾಪಂ ಮಾಜಿ ಸದಸ್ಯ ಶಿವಪ್ರಕಾಶ್, ಗೊಲ್ಲರಹಳ್ಳಿ ವಾಸು, ಕೋಳಗುಂದ ರೇಣುಕಾಪ್ರಸಾದ್, ತಾವರೆಹಳ್ಳಿ ಸತೀಶ್, ಕಲ್ಯಾಡಿ ಬಸವರಾಜ್, ಮೂರ್ತಿ ಬಸವಣ್ಣ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿ ಎಚ್.ಕೆ.ಸುರೇಶ್ ಎದುರು ಪಟ್ಟುಹಿಡಿದು ಕುಳಿತರು.
ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಜಾವಗಲ್ ಹೋಬಳಿ ಬಗೆಗೆ ಮಲತಾಯಿ ಧೋರಣೆ ಅನುಸರಿಸುವ ಚಾಳಿ ಈಗಲೂ ಮುಂದುವರಿದಿದೆ. ಇವೆಲ್ಲವನ್ನೂ ಇಷ್ಟಕ್ಕೆ ಬಿಡುವುದಿಲ್ಲ. ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗೆ ತಕ್ಕಪಾಠ ಕಲಿಸದೇ ಬಿಡುವುದಿಲ್ಲ. ಸಾರ್ವಜನಿಕರ ಕಚೇರಿಗೆ ಬೀಗಹಾಕುವುದು ಸರಿಯಾದ ಕ್ರಮವಲ್ಲ. ಕೆಲ ದಿನ ಕಾಯಿರಿ ಎಂದು ಶಾಸಕ ಸುರೇಶ್ ಎಲ್ಲರನ್ನೂ ಸಮಾಧಾನಪಡಿಸಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ಅಧಿಕಾರಿಗಳ ಸಭೆ ಆಯೋಜನೆ ಮಾಡಲಾಗಿದೆ ಎಂದು ಸಕಾಲಕ್ಕೆ ದೌಡಾಯಿಸಿದ ಬೇಲೂರು ಶಾಸಕ ಎಚ್.ಕೆ.ಸುರೇಶ್ ಯಾರೊಬ್ಬರೂ ಇಲ್ಲದೇ ಏಕಾಂಗಿಯಾಗಿ ಕುಳಿತು ಬರೋಬ್ಬರಿ ಎರಡೂವರೆ ತಾಸು ಜನರ ಅಹವಾಲು ಆಲಿಸಿದರು. ಕ್ಷೇತ್ರದ ಜನರ ಕುಂದು,ಕೊರತೆ ಆಲಿಸಲು ಜು.1ರಂದು ಸಭೆ ಕರೆಯುವಂತೆ ತಾಪಂ ಇಒ ಸತೀಶ್ ಅವರಿಗೆ ಜೂ.26ರಂದು ಎಚ್‌ಕೆಎಸ್ ಲಿಖಿತ ಪತ್ರ ನೀಡಿದ್ದರು. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಸಾಮರ್ಥ್ಯಸೌಧ ಸಭಾಂಗಣ ಖಾಲಿ ಖಾಲಿಯಾಗಿತ್ತು. ಶಾಸಕರ ಪತ್ರಕ್ಕೆ ಕ್ಯಾರೇ ಎನ್ನದ ತಾಪಂ ಇಒ ಸತೀಶ್ ನಡೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.