

ಗಿರೀಶ ದೇಶಪಾಂಡೆ ಹಾನಗಲ್ಲ
ತಾಲೂಕಿನಾದ್ಯಂತ ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಗೆ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಾತನಹಳ್ಳಿ ಸಮೀಪದ ಕುಂಟನಹೊಸಳ್ಳಿ ಫೀಡರ್ ಕಾಲುವೆ ಒಡೆದು ಕಾಲುವೆ ಅಚ್ಚುಕಟ್ಟು ಪ್ರದೇಶದ ಬೆಳೆಗಳು ಜಲಾವೃತಗೊಂಡಿವೆ.
ಕುಂಟನಹೊಸಳ್ಳಿ ಫೀಡರ್ ಕಾಲುವೆ ಅಡಿಯಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು, ಗೋವಿನಜೋಳವನ್ನು ಬೆಳೆಯಲಾಗುತ್ತದೆ. ಈ ಕಾಲುವೆಗೆ ತಾಲೂಕಿನ ಬೊಮ್ಮನಹಳ್ಳಿ, ಬಸಾಪುರ, ಯಳವಟ್ಟಿ, ಯಳ್ಳೂರು, ಬೈಚವಳ್ಳಿ ಕೆರೆಗಳು ತುಂಬಿದ ನಂತರ ಬೃಹತ್ ಪ್ರಮಾಣದ ನೀರು ಹರಿದು ಬರುತ್ತದೆ. ಅಪಾರ ಪ್ರಮಾಣದ ಈ ನೀರು ಮಲ್ಲಿಗ್ಗಾರ ಕಾಲುವೆಯ ಮೂಲಕ ಕುಂಟನಹೊಸಳ್ಳಿ ಕೆರೆಗೆ ತಲುಪಿ ನಂತರ ಕಂಚಿನೆಗಳೂರ ಒಡ್ಡಿಗೆ ಸೇರುತ್ತದೆ.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಫೀಡರ್ ಕಾಲುವೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಒಡೆದು ನೀರು ಹೊಲಗಳಿಗೆ ನುಗ್ಗಿ ಪೈರನ್ನು ನಾಶ ಮಾಡುತ್ತಿದೆ. ಕಳೆದ 5 ವರ್ಷಗಳ ಹಿಂದೆ ಮಲೆನಾಡು ಪ್ರದೇಶಾಭಿವೃದ್ಧಿ ಅನುದಾನದಡಿ 15 ಲಕ್ಷ ರೂ. ಗಳಲ್ಲಿ ಕಾಲುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಸಮರ್ಪಕವಾದ ಕಾಮಗಾರಿ ನಡೆಯದ್ದರಿಂದ ನೀರು ಹೊಲಗಳಿಗೆ ನುಗ್ಗುತ್ತಿದೆ. ಕಾಲುವೆಯಲ್ಲಿನ ಹೂಳು ತೆಗೆಸದ ಕಾರಣ ಕಾಲುವೆಯಲ್ಲಿ ರಭಸದಿಂದ ಹರಿದುಬರುವ ನೀರು ಕಾಲುವೆ ಪಕ್ಕದ ಎಲ್ಲ ಹೊಲಗಳಿಗೆ ನುಗ್ಗಿ ಪೈರನ್ನು ಕೊಚ್ಚಿಕೊಂಡು ಹೋಗುತ್ತಿವೆ.
ದುರಸ್ತಿಯಾಗದ ಕಾಲುವೆ: ಫೀಡರ್ ಕಾಲುವೆಯಲ್ಲಿನ ಹೂಳನ್ನು ತೆಗೆಸುವುದು, ಹಳ್ಳದ ನೀರು ಹೊಲಗಳಿಗೆ ನುಗ್ಗದಂತೆ ಕಾಲುವೆಯ ಎರಡೂ ಬದಿಯ ಗೋಡೆಗಳನ್ನು ಎತ್ತರಿಸುವುದನ್ನು ಕಾಮಗಾರಿಯಲ್ಲಿ ಸೇರಿಸಲಾಗಿತ್ತು. ಆದರೆ, 5 ವರ್ಷಗಳ ಹಿಂದೆ ಕಾಮಗಾರಿ ಕೈಗೊಂಡ ಸಮಯದಲ್ಲಿ ಒಂದಷ್ಟು ಹೂಳು ತೆಗೆದಿದ್ದನ್ನು ಹೊರತುಪಡಿಸಿ ಇನ್ನಾವುದೇ ಕಾಮಗಾರಿ ಕೈಗೊಳ್ಳಲಿಲ್ಲ. ಅದರ ನಂತರ ಪ್ರತಿ ವರ್ಷ ಕಾಲುವೆಗೆ ನೀರಿನೊಂದಿಗೆ ಮಣ್ಣು ಹರಿದುಬಂದು ಕಾಲುವೆ ತುಂಬ ಹೂಳು ತುಂಬಿಕೊಂಡಿದೆ. ಗಿಡ-ಗಂಟಿಗಳು ಬೆಳೆದುನಿಂತಿವೆ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಆರೋಪಿಸುತ್ತಾರೆ.
ದೊರಕದ ಪರಿಹಾರ: ಕಳೆದ ಮೂರ್ನಾಲ್ಕು ವರ್ಷಗಳಿಂದ ಫೀಡರ್ ಕಾಲುವೆ ಒಡೆದು ದೊಡ್ಡ ಪ್ರಮಾಣದ ನೀರು ಹೊಲಗಳಲ್ಲಿನ ಪೈರನ್ನು ಕೊಚ್ಚಿಕೊಂಡು ಹೋಗಿದ್ದರೂ ಕೃಷಿ ಇಲಾಖೆ ಬಿಡಿಗಾಸು ಪರಿಹಾರವನ್ನೂ ನೀಡಿಲ್ಲ. ಬೆಳೆ ವಿಮೆ ಪರಿಹಾರವೂ ಬಂದಿಲ್ಲ ಎಂದು ರೈತರಾದ ಎಂ.ಎಸ್.ದಾನಪ್ಪನವರ, ಗದಿಗೆಪ್ಪ ಗೊಂದಿ, ಮಹೇಶ ಗೊಂದಿ, ಗಣಪತಿ ಗೊಂದಿ, ಗುರುಶಾಂತಪ್ಪ ಕಾಡಪ್ಪನವರ, ರಾಮಚಂದ್ರ ಲಮಾಣಿ, ಮಲ್ಲಪ್ಪ ಹಾವೇರಿ, ರಾಮು ಲಮಾಣಿ, ಸೋಮಣ್ಣ ಲಮಾಣಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಾಲುವೆ ಏರಿಯನ್ನು ಎತ್ತರಿಸಿ ಕಾಂಕ್ರೀಟ್ ಲೈನಿಂಗ್ ಮಾಡಿದ್ದರೆ ಇಂಥ ಮಳೆಗೆ ಕಾಲುವೆ ಒಡೆಯುತ್ತಿರಲಿಲ್ಲ. ಸರಾಗವಾಗಿ ನೀರು ಹರಿಯುತ್ತಿತ್ತು. ಈ ಕಾಲುವೆ ಗ್ರಾಮದಿಂದ ತೀರಾ ಒಳಗೆ ಇರುವುದರಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ್ಕೊಳಗಾಗಿದೆ. ಕಾಲುವೆ ಕಾಮಗಾರಿ ಕೈಗೊಳ್ಳುವಂತೆ ನೀರಾವರಿ ಇಲಾಖೆಗೆ ಪ್ರತಿವರ್ಷ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ.ಪುಟ್ಟಪ್ಪ ಹಾವೇರಿ ಅಚ್ಚುಕಟ್ಟು ಪ್ರದೇಶದ ರೈತ
5 ಕಿಮೀವರೆಗೆ ಫೀಡರ್ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ಹೂಳನ್ನು ತೆರವುಗೊಳಿಸಬೇಕಿದೆ. ಈ ಹಿಂದೆ 15 ಲಕ್ಷ ರೂ. ಗಳಲ್ಲಿ ಕಾಮಗಾರಿ ಕೈಗೊಂಡಿದ್ದ ಮಾಹಿತಿಯಿದೆ. ಪ್ರಸ್ತುತ ಅತಿವೃಷ್ಟಿ ಹಾನಿಯ ವರದಿಯಲ್ಲಿ ಈ ಕಾಲುವೆ ಮಾಹಿತಿ ನೀಡಿದ್ದೇವೆ. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಕೈಗೊಳ್ಳಲಾಗುವುದು. ಚಿದಂಬರ ಹಾವನೂರ ಎಇಇ ಸಣ್ಣ ನೀರಾವರಿ ಇಲಾಖೆ ಹಾನಗಲ್ಲ