ಕೀರ್ತನೆ, ಕಾವ್ಯದ ಮೂಲಕ ವೈಚಾರಿಕತೆ ಅರಿವು

18-kkr1(11-24 kanaka jayanti
Published on

ಕಿಕ್ಕೇರಿ: ನಾನು ಎಂಬ ಅಹಂ ಬಿಟ್ಟರೆ ಪರಮಾತ್ಮನನ್ನು ನಮ್ಮಲ್ಲಿಯೇ ಕಾಣಬಹುದು ಎಂಬ ಅರಿವು ಮೂಡಿಸಿದವರು ದಾರ್ಶನಿಕ ಕನಕದಾಸರು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಲುವರಾಜ್ ತಿಳಿಸಿದರು.

ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆ, ದಾಸ ಸಾಹಿತ್ಯಕ್ಕೆ ಹೊಸಭಾಷ್ಯ ಬರೆದವರು ಕನಕದಾಸರು. 16ನೇ ಶತಮಾನದಲ್ಲಿ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತಸಾರದಂತಹ ಉತ್ಕೃಷ್ಟ ಕಾವ್ಯ ರಚಿಸಿ ಸರ್ವಶ್ರೇಷ್ಠರಾದರು. ಸಾಮರಸ್ಯದ ಬದುಕಿಗೆ ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತೆ ಸಾವಿರಾರು ಕೀರ್ತನೆಗಳನ್ನು ರಚಿಸಿ ಸಮಾನತೆಯ ಬೀಜವನ್ನು ನಾಡಿಗೆ ಬಿತ್ತಿದರು ಎಂದು ಬಣ್ಣಿಸಿದರು.

ಅಂದು ಕನಕರು ಬಿತ್ತಿದ್ದ ಸಾಮರಸ್ಯದ ಕೀರ್ತನೆಯ ಬೀಜವನ್ನು ಸರಿಯಾಗಿ ಅರ್ಥೈಸಿಕೊಂಡರೆ ಜಾತಿ ಸಂಘರ್ಷ ದೂರವಾಗಿ ಮನುಕುಲ ಉದ್ಧಾರವಾಗಲಿದೆ. ಜಾತಿ ಪದ್ಧತಿ ವಿರುದ್ಧ ಕೀರ್ತನೆ, ಕಾವ್ಯದ ಮೂಲಕ ವೈಚಾರಿಕತೆ ಮೂಡಿಸಿದರು. ಸರ್ವರ ವಿಕಾಸಕ್ಕೆ ಸಾಮಾಜಿಕ ನ್ಯಾಯ ಆಧಾರ ಸ್ತಂಭವಾಗಬೇಕು ಎಂದು ಕೀರ್ತನೆಯಲ್ಲಿ ಸಾರಿದರು. ಬಡವ, ಶ್ರೀಮಂತ ಎನ್ನುವುದನ್ನು ರಾಗಿ, ಭತ್ತದ ಮೂಲಕ ರಾಮಧಾನ್ಯ ಚರಿತೆಯಲ್ಲಿ ತಿಳಿಸಿಕೊಟ್ಟಿದ್ದು ಇಂತಹ ಗ್ರಂಥಗಳನ್ನು ಪ್ರತಿಯೊಬ್ಬರೂ ಓದಿದರೆ ಬದುಕು ಸರಳ, ಸುಂದರವಾಗಲಿದೆ ಎಂದು ನುಡಿದರು.

ಗ್ರಾಪಂ ಅಧ್ಯಕ್ಷ ಕೆ.ಜೆ.ಪುಟ್ಟರಾಜು, ಸದಸ್ಯರು, ಪೌರಕಾರ್ಮಿಕರು ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಸಿಬ್ಬಂದಿ ಶ್ರೀಕಾಂತ್, ಪ್ರದೀಪ್, ಪೌರಕಾರ್ಮಿಕರಾದ ಚಾಮುಂಡಿ, ನಾಗರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net