ಕಿರವತ್ತಿ ವೈದ್ಯಾಧಿಕಾರಿ ವರ್ಗಾವಣೆಗೆ ವಿರೋಧ

30 YLP 05
Published on

ಯಲ್ಲಾಪುರ: ತಾಲೂಕಿನ ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಅವರ ವಿರುದ್ಧ ಕೆಲವರು ಷಡ್ಯಂತ್ರ ನಡೆಸುತ್ತಿದ್ದು, ವೈಯಕ್ತಿಕ ದ್ವೇಷ ಸಾಧಿಸಿ ಬೇರೆಡೆ ವರ್ಗಾಯಿಸುವ ಕಸರತ್ತು ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಅದಕ್ಕೆ ಒಪ್ಪಬಾರದು. ವೈದ್ಯರನ್ನು ಕಿರವತ್ತಿಯಲ್ಲೇ ಮುಂದುವರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು, ವಿವಿಧ ಸಂಘಟನೆಗಳ ಪ್ರಮುಖರು ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದರು.

ವೈದ್ಯ ಸಂತೋಷಕುಮಾರ ಕಿರವತ್ತಿ ಕೇಂದ್ರಕ್ಕೆ ಬಂದ ನಂತರ ಬಡವರು ಅನಾರೋಗ್ಯ ಸಮಸ್ಯೆಯಿಂದ ಪರದಾಡುವುದು ತಪ್ಪಿದೆ. ಕರೊನಾ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ. ಬಡವರ ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಇಂತಹ ವೈದ್ಯರು ಕೆಲವೇ ಕೆಲವು ಜನರ ವೈಯಕ್ತಿಕ ಹಿತಾಸಕ್ತಿಗಾಗಿ ಇಲ್ಲಿಂದ ಹೋಗಬಾರದು. ಅದಕ್ಕೆ ಆರೋಗ್ಯ ಇಲಾಖೆ ಅವಕಾಶ ಮಾಡಿಕೊಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದರು. ಉಸ್ತುವಾರಿ ವೈದ್ಯಾಧಿಕಾರಿ ಡಾ. ಮಂಜುನಾಥ ನಾಯ್ಕ ಮನವಿ ಸ್ವೀಕರಿಸಿದರು. ದೋಂಡು ಪಾಟೀಲ, ವಿಠ್ಠು ಶೆಳಕೆ, ವಿಠ್ಠಲ ಪಾಂಡ್ರಮೀಸೆ, ಪ್ರಭು ಚಿಂಚಕಂಡಿ, ಬಾಬಾಸಾಬ, ಬಜ್ಜು ಪಿಂಗಳೆ ಸೇರಿ ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net