

* ಭಯೋತ್ಪಾದಕರ ವಿರುದ್ಧ ಘೋಷಣೆ
* ಹಿಂದು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ
ರಾಮನಗರ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳ ಮೇಲಿನ ದಾಳಿ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.
ರಾಮನಗರದ ಐಜೂರು ಸರ್ಕಲ್‌ನಲ್ಲಿ ಸಂಜೆ ಸೇರಿದ ಪ್ರತಿಭಟನಾಕಾರರು ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ಘೋಣೆ ಕೂಗುತ್ತಾ ಕಿಡಿಕಾರಿದರು.
ಬಿಜೆಪಿ ಮುಖಂಡ ಗೌತಮ್‌ಗೌಡ ಮಾತನಾಡಿ, ಪಹಲ್ಗಾಮ್‌ನಲ್ಲಿ ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಾಣಿಯಲ್ಲಿ ಬೆಳೆದವರು ನಾವು. ಆಚಾರ ವಿಚಾರ ಸಂಸ್ಕೃತಿ ಇರುವ ದೇಶದಲ್ಲಿ ಧರ್ಮವನ್ನು ಕೇಳಿ ಹತ್ಯೆಗೈದಿರುವುದು ನೋವು ತಂದಿದೆ. ಹಿಂದುಗಳ ಮೇಲಿನ ಕೃತ್ಯ ಖಂಡಿಸುತ್ತೇವೆ. ಇಂತಹ ಘೋರ ಘಟನೆ ನಡೆಸುವ ಮೂಲಕ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಇಂತಹವರನ್ನು ಬಂಧಿಸಿ ಜೈಲಿಗಟ್ಟಿದರೆ ಯಾವ ಪ್ರಯೋಜನ ಇಲ್ಲ. ಇವರನ್ನು ನೇರವಾಗಿ ಸಾಹಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ವಿರೋಧ ಪಕ್ಷಗಳು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ಬೇಡ ಇದನ್ನು ರಾಜಕೀಯವಾಗಿ ಎಳೆಯಬೇಡಿ. ಕಳೆದ 11 ವರ್ಷಗಳಿಂದ ಯಾವ ಘಟನೆಗಳೂ ಆಗಿರಲಿಲ್ಲ ಮುಂದಾದರೂ ಜಾತಿ ಜಾತಿ ಲೆಕ್ಕಾಚಾರ ಬಿಟ್ಟು ನಾವೆಲ್ಲ ಹಿಂದು ಎಂದು ಒಗ್ಗಟ್ಟಾಗಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಪ್ರಸಾದ್‌ಗೌಡ ಮಾತನಾಡಿ, ಈ ಘಟನೆಗೆ ಪ್ರತಿಕಾರ ಆಗಬೇಕು. ಇಲ್ಲದಿದ್ದರೆ ಮುಂದೆ ಹಿಂದು ಧರ್ಮದವರು ಬಾಳಲು ಸಾಧ್ಯವಿಲ್ಲ. ಎಲ್ಲರೂ ಜಾತಿ ಪಂಗಡ ಮೀಸಲಾತಿ ಒಳ ಮೀಸಲಾತಿ ಬಿಟ್ಟು ನಾವೆಲ್ಲಾ ಹಿಂದು ಎಂದೂ ಒಗ್ಗಟ್ಟಾಗಬೇಕು. ಜಾತಿ ಜಾತಿಗೆ ಇರುವ ಸ್ವಾಮೀಜಿಗಳು, ಹಿಂದು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಹಿಂದು ಮುಖಂಡ ಅನಿಲ್ ಮಾತನಾಡಿದರು.
ಉಗ್ರರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕುತ್ತಿದ್ದ ಸಂದರ್ಭದಲ್ಲಿ ಪೊಲೀಸರು ತಡೆಯಲು ಮುಂದಾದರು ಆಗ ಪ್ರತಿಭಟನಾ ನಿರತರು ಪೊಲೀಸರ ಜತೆ ವಾಗ್ವಾದ ನಡೆಸಿ ನಾವು ಉಗ್ರರ ಪ್ರತಿಕೃತಿ ದಹಿಸುತ್ತಿದ್ದೇವೆ. ನಮಗೆ ಅಡ್ಡಿಪಡಿಸಬೇಡಿ, ನಮ್ಮ ಆಕ್ರೋಶದ ಕಟ್ಟೆ ಹೊಡೆದಿದೆ. ಹೃದಯ ಕುದಿಯುತ್ತಿದೆ ಎಂದು ಪೊಲೀಸರ ಜತೆ ಏರು ದನಿಯಲ್ಲಿ ಮಾತು ನಡೆಸಿದರು. ಪೋಲೀಸರು ಅವರ ಆಕ್ರೋಶಕ್ಕೆ ತಡೆ ಒಡ್ಡಲು ಸಾಧ್ಯವಾಗದೆ ಸುಮ್ಮನಾದರು.
ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಎಸ್. ಜಗದೀಶ್, ರಾಜ್ಯ ವಕ್ತಾರ ರುದ್ರದೇವರು, ಹಿಂದು ಹಿತರಕ್ಷಣಾ ಸಮಿತಿ ನಂದೀಶ್, ಹಿಂದು ಪರಿವಾರ ಕಾರ್ಯಕರ್ತರಾದ ಸುಹಾಸ್, ಜ್ಞಾನೇಶ್, ಮೋಹಿತ್, ಬಿಜೆಪಿ ಮುಖಂಡರಾದ ಶಿವಾನಂದ್, ಕಿಶನ್, ರಾಘವೇಂದ್ರ, ಜಗನ್ನಾಥ್ ಮುಂತಾದವರಿದ್ದರು.