

ಬಾಗಲಕೋಟೆ: ಸಚಿವ ಮುರುಗೇಶ ನಿರಾಣಿ ತಮ್ಮ ವಿರುದ್ದ ಆಗಾಗ್ಗೆ ವ್ಯಂಗ್ಯ, ಟೀಕೆ ಮಾಡುತ್ತಿದ್ದ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಿರುದ್ದವೂ ಗುಡುಗಿದ್ದಾರೆ.
ನಗರದ ಪ್ರೇಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಬಾರಕೋಲ್ ಚಳುವಳಿ ಮಾಡುತ್ತೇನೆ ಅಂತಾರೆ. ಹಿಂದೆ ಸರ್ಕಾರ ನಿಮ್ಮದೇ ಇತ್ತು. ನಿಮ್ಮ ತಂದೆಯೇ ಮಂತ್ರಿ ಆಗಿದ್ದರು. ಜೊತೆ ಪಂಚಮಸಾಲಿ ರಾಜ್ಯಾಧ್ಯಕ್ಷರು ಆಗಿದ್ದರು. ಆ ವೇಳೆಯಲ್ಲಿ ನೀನು ಯಾಕೆ ಮಾಡಲಿಲ್ಲ? 3ಬಿ, 2ಎ ಗೆ ಯಾಕೆ ಸೇರಿಸಲಿಲ್ಲ? ಆಗ ಎಲ್ಲಿತ್ತು ನಿನ್ನ ಬಾರಕೋಲ್? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೆಸರು ಹೇಳದೆ ವಿಜಯಾನಂದ ಕಾಶಪ್ಪನವರಗೆ ಟಾಂಗ್ ನೀಡಿದರು.
ಅವರು(ವಿಜಯಾನಂದ ಕಾಶಪ್ಪನವರ) ನನ್ನ ಸೋಲಿಸುತ್ತೇನೆ ಎಂದು ಸವಾಲ್ ಹಾಕಿದ್ದಾರೆ. ನನ್ನ ಸೋಲಿಸುವುದು, ಗೆಲ್ಲಿಸುವುದು ಬೀಳಗಿ ಕ್ಷೇತ್ರದ ಜನರು. ಅವರ ಆಶೀರ್ವಾದದಿಂದ ನಾನು ಗೆದ್ದಿದ್ದು, ಸಚಿವನಾಗಿದ್ದು. ಇದಕ್ಕೆ ಪಕ್ಷದ ಹಿರಿಯರ ಆಶೀರ್ವಾದ ಇದೆ. ನೀನು ಕಾಂಗ್ರೆಸ್ ನಲ್ಲಿ ಇದ್ದೀಯಾ. ನಾನು ಬಿಜೆಪಿ. ಹೀಗಾಗಿ ನೀನು ನನಗೆ ರಾಜಕೀಯ ವಿರೋಧಿ. ನಿನ್ನ ಚಾಲೆಂಜ್ ಸ್ವೀಕರಿಸಿದ್ದೇನೆ. ಅದನ್ನು ನೀನು ಮುಂದುವರೆಸು. ಆದರೆ, ಬಾಯಿ ಚಪಲಕ್ಕೆ ಮಾತನಾಡಬೇಡ. ನಿನ್ನ ಬಾಡಿ ಲಾಂಗ್ವೆಜ್ ಬದಲಾವಣೆ ಮಾಡಿಕೋ. ಎಲ್ಲ ಕಡೆಗೂ ಲೂಸ್ ಟಾಕ್ ಆಗಬೇಡ ಎಂದು ತಿವಿದರು.
ಇಂತವರು (ಯತ್ನಾಳ) ವಿಧಾನಸಭೆಯ 3ನೇ ಪ್ಲೋರ್ ನಲ್ಲಿ ಕೂರುತ್ತಾರೆ ಎಂದು ಹೇಳುತ್ತೀಯಾ? ಹಾಗಾದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ಏನು ಹೇಳುತ್ತಿಪಾ…? ನಿಮ್ಮ ಪಕ್ಷದ ಸಿಎಂ ಆಕಾಂಕ್ಷಿಗಳಿಗೆ ಏನು ಉತ್ತರ ಕೊಡುತ್ತಿಯಾ? ನೀನು ಇನ್ನೊಬ್ಬರನ್ನ 3ನೇ ಪ್ಲೋರ್ ನಲ್ಲಿ ಕೂರಿದುವಷ್ಡು ಶಕ್ತಿವಂತ ಆಗಿದ್ದರೆ ನೀನ್ಯಾಕೆ ಸೋತು ಕೂರುತ್ತಿದ್ದೆ? ಎಂಪಿ(ಪತ್ನಿ ವೀಣಾ ಕಾಶಪ್ಪನವರ) ನೂ ಮಾಡಕಾಗದೇ ನೀನು ಎಂಎಲ್ ಎ ಆಗಲಿಲ್ಲ ಎಂದು ಮಾಜಿ ಶಾಸಕ ವಿಜಯಾದ ಕಾಶಪ್ಪನವರ ವಿರುದ್ದ ಸಚಿವ ಮುರುಗೇಶ್ ನಿರಾಣಿ ಲೇವಡಿ ಮಾಡಿದರು.