ಕಾವೇರಿ ನದಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಶವ ಪತ್ತೆ

Published on

ಕೊಳ್ಳೇಗಾಲ: ತಾಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿ ಸೇತುವೆ ಮೇಲೆ 4 ದಿನಗಳ ಹಿಂದೆ ಬೈಕ್ ನಿಲ್ಲಿಸಿ ಕಾಣೆಯಾಗಿದ್ದ ಗ್ರಾಮ ಲೆಕ್ಕಾಧಿಕಾರಿ ಮೃತದೇಹ ಭಾನುವಾರ ಯಡಕುರಿಯಾ ಕಾವೇರಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತಾಲೂಕಿನ ಚೆಲುವನಹಳ್ಳಿ ಗ್ರಾಮದ ಮಹದೇವಪ್ಪ ಅವರ ಮಗ ನಿರಂಜನಮೂರ್ತಿ(31) ಮೃತ. ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ ಹೋಬಳಿಯ ಸೋಮನಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜು.17 ರಂದು ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗುವ ಮುನ್ನ ಪತ್ನಿಗೆ ಫೋನ್ ಮಾಡಿ ನಾನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ಬದುಕಲು ಇಷ್ಟವಿಲ್ಲ ಅಂತ ಹೇಳಿ ಫೋನ್ ಸ್ವಿಚ್ ಆಫ್ ಮಾಡಿ ಕಚೇರಿಯಲ್ಲಿ ಮೊಬೈಲ್ ಫೋನ್ ಇಟ್ಟು ಚೆಲುವನಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯದ ದಾಸನಪುರ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ಕಾವೇರಿ ನದಿಗೆ ಹಾರಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ದಿನಗಳಿಂದ ಮೃತ್ತದೇಹ ಪತ್ತೆಗಾಗಿ ನುರಿತ ಈಜುಗಾರರೊಂದಿಗೆ ಬೋಟ್ ಮೂಲಕ ಶೋಧ ಕಾರ್ಯ ಕೈಗೊಂಡಿದ್ದರು. ಇದೀಗ ಮೃತದೇಹ ಯಡಕುರಿಯಾ ಕಾವೇರಿ ನದಿಯ ದಡದಲ್ಲಿ ಪತ್ತೆಯಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net