ಕಾಳುಮೆಣಸು ಕೃಷಿಗೆ ಆದ್ಯತೆ ನೀಡಿ

26sirsi2
Published on

ಶಿರಸಿ: ಕಾಳುಮೆಣಸು ಸಾಂಬಾರು ಬೆಳೆ ಮಾತ್ರವಲ್ಲದೆ ಔಷಧ ಗುಣವುಳ್ಳ ಪದಾರ್ಥವಾಗಿದ್ದು, ರೈತರು ಪರ್ಯಾಯ ಬೆಳೆಯಾಗಿ ಕಾಳುಮೆಣಸು ಕೃಷಿಗೆ ಆದ್ಯತೆ ನೀಡಬೇಕೆಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ ಕರೆ ನೀಡಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾವಿದ್ಯಾಲಯ ಶಿರಸಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಇಲಾಖೆ ಸಿದ್ದಾಪುರ., ಅಗ್ರಿಕಲ್ಚರಲ್ ಸರ್ವಿಸ್ ಆಂಡ್ ಡೆವಲಪ್​ವೆುಂಟ್ ಕೋ-ಆಪ್ ಸೊಸೈಟಿ ಶಿರಸಿ ಮತ್ತು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಶಿರಸಿ ಆಶ್ರಯದಲ್ಲಿ ಹುಣಸೆಕೊಪ್ಪ ಗ್ರಾಮದ ರಮಾಕಾಂತ ಹೆಗಡೆ ಅವರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾಳುಮೆಣಸು ಬೆಳೆಯ ಕ್ಷೇತ್ರೋತ್ಸವ ಮತ್ತು ಚರ್ಚಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕಾಳುಮೆಣಸಿಗೆ ಜಾಗತಿಕ ಮಾರುಕಟ್ಟೆಯಿದೆ. ರೈತರು ಇನ್ನು ಬೆಳೆಯುವ ಮೂಲಕ ಆರ್ಥಿಕ ಸಬಲರಾಗಬೇಕು ಎಂದರು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಶಿವಾನಂದ ಹೊಂಗಲ ಮಾತನಾಡಿ, ಇತ್ತೀಚೆಗೆ ಕಾಳುಮೆಣಸು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ರೈತರು ವಿಜ್ಞಾನಿಗಳೊಂದಿಗೆ ಸಂಪರ್ಕವಿಟ್ಟುಕೊಂಡು ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡಲ್ಲಿ ಕಾಳುಮೆಣಸು ಕೃಷಿಯಲ್ಲಿ ಯಶ ಸಾಧಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎನ್.ಕೆ.ಹೆಗಡೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಕಾಳುಮೆಣಸಿನ ತವರೂರಾಗಿದ್ದು, ಇಲ್ಲಿನ ಸ್ಥಳೀಯ ತಳಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲಾಗುತ್ತಿದೆ ಎಂದರು.

ಧಾರವಾಡದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಶಾಂತಪ್ಪ ಟಿ., ತೋಟಗಾರಿಕೆ ಇಲಾಖೆ ಸಿದ್ದಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅರುಣ ಎಚ್.ಜಿ., ಪ್ರಗತಿಪರ ರೈತರಾದ ರಮಾಕಾಂತ ಹೆಗಡೆ, ಸುಬ್ಬಣ್ಣ ಬಾಳೇಕೊಪ್ಪ ಭಾಗವಹಿಸಿದ್ದರು. ಕ್ಷೇತ್ಸೋತ್ಸವದ ನಂತರ ನಡೆದ ಚರ್ಚಾಗೋಷ್ಠಿಯಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿ.ಎಂ.ಹೆಗಡೆ., ಡಾ.ಸುಧೀಶ ಕುಲಕರ್ಣಿ, ಡಾ.ಚಂದನ ಕೆ, ಡಾ.ಅಬ್ದುಲ್ ಕರೀಮ್ ಎಂ, ಮಹಾಬಲೇಶ್ವರ ಹೆಗಡೆ ಇವರು ರೈತ ಮತ್ತು ರೈತ ಮಹಿಳೆಯರ ಜತೆ ಕಾಳುಮೆಣಸು ಕೃಷಿ ಕುರಿತು ಚರ್ಚೆ ನಡೆಸಿದರು. 50ಕ್ಕೂ ಹೆಚ್ಚಿನ ಆಸಕ್ತ ರೈತರು ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net