

ಪಿ.ಎಚ್.ಕೃಷ್ಣಮೂರ್ತಿ, ಮಾಯಕೊಂಡ: ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮ ಹಲವು ಸರ್ಕಾರಿ ಶಾಲಾ ಕಾಲೇಜುಗಳನ್ನು ಒಳಗೊಂಡ ಶಿಕ್ಷಣದ ತವರೂರು.
ಗ್ರಾಮದಲ್ಲಿನ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ಮೆಟ್ಟಿಲಾಗಿ ನಿಂತಿದೆ. ಈ ಕಾಲೇಜಿಗೆ ಮೂಲ ಸೌಲಭ್ಯಗಳ ಅಗತ್ಯ ಇದ್ದು ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಗಮನಹರಿಸಬೇಕಿದೆ.
ಮಾಯಕೊಂಡ ಗ್ರಾಮದಲ್ಲಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಐಟಿಐ ಕಾಲೇಜ್, ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯು ಜಿಲ್ಲೆಯಲ್ಲಿ ಅತಿ ಹೆಚ್ಚು 1500 ವಿದ್ಯಾರ್ಥಿಗಳನ್ನು ಹೊಂದಿರುವ ಎರಡನೇ ದೊಡ್ಡ ಶಾಲೆಯೆಂದು ಗುರುತಿಸಲ್ಪಟ್ಟಿದೆ.
ಜಿಲ್ಲಾ ಕೇಂದ್ರ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 1992 ರಲ್ಲಿ ಪ್ರಾರಂಭವಾದರೆ ಇದಕ್ಕೂ ನಾಲ್ಕು ವರ್ಷ ಮುಂಚಿತವಾಗಿ 1988 ರಲ್ಲಿ ಮಾಯಕೊಂಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾಗಿದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಪದವಿ ಶಿಕ್ಷಣ ಪಡೆಯುವವರಿಗೆ ವರವಾಗಿ, ಸಾವಿರಾರು ವಿದ್ಯಾರ್ಥಿಗಳ ಜ್ಞಾನದೇಗುಲವಾಗಿದೆ.
ಪ್ರಸ್ತುತ ಈ ಕಾಲೇಜಿನಲ್ಲಿ ಬಿಎ ಹಾಗೂ ಬಿಕಾಂ ಪದವಿಗಳು ನಡೆಯುತ್ತಿದೆ. ಒಟ್ಟು 193 ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ವಿಶ್ವ ವಿದ್ಯಾಲಯವು ಬಿಎಸ್‌ಸಿ ಪದವಿ ತರಗತಿ ಪ್ರಾರಂಭಿಸಲು ಅನುಮತಿ ನೀಡಿದರೆ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಾಲೇಜಿನಲ್ಲಿ ಎಲ್ಲ ವಿಷಯಗಳ ಪ್ರಾಧ್ಯಾಪಕರಿದ್ದು ಪ್ರತಿ ವರ್ಷ ಉತ್ತಮ ಫಲಿತಾಂಶ ಹೊರಬರುತ್ತಿದೆ.
ಯುಜಿಸಿ ನ್ಯಾಕ್ ಸಮಿತಿಯು ಕಾಲೇಜಿಗೆ ಬಿ ಶ್ರೇಣಿ ನೀಡಿದ್ದು ಜಿಲ್ಲೆಯ ಎಲ್ಲ ಗ್ರಾಮೀಣ ಕಾಲೇಜುಗಳಿಗಿಂತ ಉತ್ತಮ ಫಲಿತಾಂಶ ಹಾಗೂ ಅತ್ಯುತ್ತಮ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಸರು ಮಾಡಿದೆ.
ಪದವಿ ಪಡೆದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಸರ್ಕಾರದ ಹಲವು ಇಲಾಖೆಗಳಲ್ಲಿ ಉನ್ನತ ಅಧಿಕಾರಿ, ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಒಂದೇ ಗ್ರಾಮದಲ್ಲಿ 70 ರಿಂದ 80 ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆದಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಮಾಜ ಕಲ್ಯಾಣ ಅಥವಾ ಬಿಸಿಎಂ ಇಲಾಖೆಯಿಂದ ಕಾಲೇಜಿಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರು ಮಾಡಿದರೆ ಹೆಚ್ಚಿನ ದಾಖಲಾತಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಕೂಡಲೇ ಸರ್ಕಾರ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.
ಬಸ್ ಸಂಪರ್ಕದ ಕೊರತೆ: ಮಾಯಕೊಂಡ ಪದವಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಬಾಡ, ಕಂದಗಲ್ಲು, ಅತ್ತಿಗೆರೆ, ರಾಮಗೊಂಡನಹಳ್ಳಿ, ಮಳಲ್ಕೆರೆ, ಲೋಕಿಕೆರೆ, ನರಗನಹಳ್ಳಿ, ಬಾವಿಹಾಳ್, ಹೊನ್ನನಾಯಕನಹಳ್ಳಿ, ಒಬೇನಹಳ್ಳಿ, ಹಿಂಡಿಸಕಟ್ಟೆ, ಕ್ಯಾತನಹಳ್ಳಿ, ಯಕ್ಕೆಗೊಂದಿ, ಕೊಮಾರನಹಳ್ಳಿ ಸೇರಿ ಇನ್ನೂ ಹಲವು ಗ್ರಾಮಗಳಿಂದ ಮಾಯಕೊಂಡ ಸಂಪರ್ಕಿಸಲು ಬಸ್ ಕೊರತೆಯಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದಾವಣಗೆರೆಯಿಂದ ಸುಮಾರು 35 ಕಿಮೀ ದೂರದಲ್ಲಿರುವ ಮಾಯಕೊಂಡ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳು ಕಾಲೇಜಿಗೆ ನಿತ್ಯ ಬಸ್‌ಗಳಲ್ಲಿ ಓಡಾಡುವುದು ಕಷ್ಟ ಸಾಧ್ಯದ ಕೆಲಸವಾಗಿದೆ. ಆದ್ದರಿಂದ ಕಾಲೇಜಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬುದು ಪಾಲಕರ ಅಭಿಪ್ರಾಯವಾಗಿದೆ.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ಪ್ರಾರಂಭವಾದರೆ ಸುತ್ತಮುತ್ತಲ ಹಲವು ಗ್ರಾಮಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗುತ್ತದೆ.
ಆರ್. ಪೂಜಾ ಹಳೆಯ ವಿದ್ಯಾರ್ಥಿನಿ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾಯಕೊಂಡ
ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ವಸತಿ ನಿಲಯದ ಅವಶ್ಯಕತೆ ಇದೆ. ಸರ್ಕಾರದಿಂದ ಬಿಎಸ್‌ಸಿ ಪದವಿ ಮಂಜೂರಾಗಿದ್ದು ತರಗತಿ ಆರಂಭಿಸಲು ಅನುಮತಿ ಕೋರಿ ವಿವಿಗೆ ಪತ್ರ ಬರೆಯಲಾಗಿದೆ.
ಡಾ. ಎಂ. ಎನ್. ತ್ರಿವೇಣಿ ಪ್ರಾಚಾರ್ಯರು ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮಾಯಕೊಂಡ
ಮಾಯಕೊಂಡ ಪದವಿ ಕಾಲೇಜಿನ ಶೈಕ್ಷಣಿಕ ಅನುಕೂಲತೆಯ ಹಿತದೃಷ್ಟಿಯಿಂದ ಬಿಸಿಎಂ ಅಥವಾ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಿಗೆ ಸಂಬಂಧಿಸಿದ ಸಚಿವರು ಹಾಗೂ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜೂರಾತಿಗೆ ಮನವಿ ಮಾಡಲಾಗುವುದು.
ಕೆ.ಎಸ್. ಬಸವಂತಪ್ಪ ಶಾಸಕರು ಮಾಯಕೊಂಡ