

ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಮಣಿಗೆರೆ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸೇವೆಯ ಸುಧಾರಣೆಗಾಗಿ ಹೊಸ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲೇಜಿನ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕಾಲೇಜಿಗೆ ವಿವಿಧ ಕೋರ್ಸ್‌ಗಳನ್ನು ಆರಂಭಿಸಲು ಈಗಾಗಲೇ ಸರ್ಕಾರದ ಜತೆಗೆ ಚರ್ಚಿಸಲಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಕೋರಿಕೆಯ ಮೇರೆಗೆ ಮಣಿಗೆರೆ ಗೇಟ್ ಬಳಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಬಸ್‌ಗಳಿಗೆ ಕೋರಿಕೆಯ ಬಸ್‌ಗಳ ನಿಲುಗಡೆಗೆ ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಸಂಸ್ಥೆಗೆ ಪತ್ರ ಬರೆದು ಅವಕಾಶ ಕೊರಲಾಗಿತ್ತು. ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಕೋರಿಕೆ ನಿಲುಗಡೆ ಮಾಡಿದ್ದಾರೆ ಎಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮದ್ದೂರು- ಭಾರತೀನಗರದಿಂದ ಮಣಿಗೆರೆ ಕಾಲೇಜಿಗೆ ಸಾರಿಗೆ ಬಸ್ ಸೌಲಭ್ಯವನ್ನು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಿದ್ದು ಇದರಿಂದ ಕಾಲೇಜಿಗೆ ಹೆಚ್ಚು ಪ್ರವೇಶ ಪಡೆಯಲು ಅನುಕೂಲ ವಾತಾವಾರಣ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುದಿನದ ಬೇಡಿಕೆಯಾದ ಸಾರಿಗೆ ಬಸ್ ಸೇವೆಯನ್ನು ಕಲ್ಪಿಸಿ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಿದರು. ಬಳಿಕ ಶಾಸಕ ಕದಲೂರು ಉದಯ್ ಶಾಸಕರು ನೂತನ ಬಸ್‌ಗೆ ಅಧಿಕೃತವಾಗಿ ಚಾಲನೆ ನೀಡಿ ಅದೇ ಬಸ್‌ನಲ್ಲಿ ಭಾರತೀನಗರದವರೆಗೆ ಪ್ರಯಾಣಿಸಿದರು.
ಈ ಬಸ್ ಸೌಲಭ್ಯ ದಿನನಿತ್ಯ ಮದ್ದೂರು -ಭಾರತೀನಗರದಿಂದ ಮಣಿಗೆರೆ ಕಾಲೇಜಿನವರೆಗೆ ಹಾಗೂ ಕಾಲೇಜಿನಿಂದ ಮತ್ತೆ ಭಾರತೀನಗರದ ಮೂಲಕ ಮದ್ದೂರಿಗೆ ಕಾಲೇಜಿನ ಸಮಯಗಳಲ್ಲಿ ಸಂಚರಿಸಲಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ಮೂರ್ತಿ, ಸಾರಿಗೆ ನಿರೀಕ್ಷಕ ಚುಂಚಯ್ಯ, ಟಿ.ಸಿ.ಚಂದ್ರು, ಮುಖಂಡರಾದ ಅಭಿಷೇಕ, ಪ್ರಕಾಶ್, ಶ್ರೀನಿವಾಸ್, ಪೂಜಾರಿ ಮಹೇಶ್ ಉಪಸ್ಥಿತರಿದ್ದರು.