

ಕಲಬುರಗಿ: ಕಾಲಹರಣ ಮಾಡುವುದನ್ನು ಬಿಟ್ಟು ಕಾಯಕದಲ್ಲಿ ತೊಡಗಿಕೊಳ್ಳಿ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕ, ಚಿಂತಕ ಕೆ.ಎನ್. ಗೋವಿಂದಾಚಾರ್ಯ ಸಲಹೆ ನೀಡಿದರು.
ಭಾರತ ವಿಕಾಸ ಸಂಗಮ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ವಿಕಾಸ ಅಕಾಡೆಮಿ ಸಹಯೋಗದಡಿ ನಗರದ ಖಮಿತ್ಕರ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ೭ನೇ ಉತ್ಸವ, ಕೊತ್ತಲ ಸ್ವರ್ಣ ಜಯಂತಿ ಕಾರ್ಯಕ್ರಮದ ಸ್ವಾಗತ ಸಮಿತಿಗಳನ್ನು ಅನಾವರಣಗೊಳಿಸಿದ ಅವರು, ಇಂದಿನ ದಿನಗಳಲ್ಲಿ ಭಾರತವಷ್ಟೇ ಅಲ್ಲ. ಇಡೀ ವಿಶ್ವ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಈಗಾಗಲೇ ಅನೇಕ ದೇಶಗಳು ಕೆಟ್ಟ ಸ್ಥಿತಿಗೆ ತಲುಪಿವೆ. ಇದರಿಂದ ಹೊರಬರಲು ಪ್ರಕೃತಿ ಕೇಂದ್ರಿತ ವಿಕಾಸದತ್ತ ಹೆಜ್ಜೆ ಇರಿಸುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಭಾರತ ವಿಕಾಸ ಸಂಗಮ ಕಳೆದ ಅನೇಕ ವರ್ಷಗಳಿಂದ ವಿಕಾಸ ಸಂಕಲ್ಪದ ಪರಿಕಲ್ಪನೆಯೊಂದಿಗೆ ಬದಲಾವಣೆ ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶವ್ಯಾಪಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೇಡಂ ತಾಲೂಕಿನ ಬೀರನಹಳ್ಳಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ವಿರಾಟ ರೂಪ, ಜನಜಾಗೃತಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಿಕ್ಷಣ ತಜ್ಞ, ಚಿಂತಕ ಡಾ.ಗುರುರಾಜ ಕರಜಗಿ ಮಾತನಾಡಿ, ಸಂಸ್ಕೃತಿ ಅದೊಂದು ಬಹು ದೊಡ್ಡ ಮೌಲ್ಯ. ಅದು ಮನೆಯಿಂದಲೇ ಶುರು ಆಗಬೇಕು. ಮನೆಯಲ್ಲಿ ತಂದೆ ತಾಯಿ ಮಾಡುವುದನ್ನು ಮಕ್ಕಳು ಅನುಸರಿಸುತ್ತವೆ. ಮಕ್ಕಳು ಸುಸಂಸ್ಕೃತರಾಗಬೇಕು ಎಂದಾದರೆ ತಂದೆತಾಯಿ ಒಳ್ಳೆಯ ಕೆಲಸ ಮಾಡಬೇಕು. ಸುಸಂಸ್ಕೃತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣ ನೀತಿಯಲ್ಲಿ ಸಂಸ್ಕೃತಿ ಅಳವಡಿಕೆ ಆಗಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕೃತಿ ಅಳವಡಿಕೆ ಆಗಿರುವುದು ಸ್ವಾಗತಾರ್ಹ. ಸಂಸ್ಕೃತಿ ಉತ್ಸವ ಮನೆಯಿಂದ ಪ್ರಾರಂಭವಾಗಬೇಕು. ಆಗ ಮಾತ್ರ ಬಹಿರಂಗವಾಗಿ ನಡೆಯುವ ಸಾಂಸ್ಕೃತಿಕ ಉತ್ಸವ, ಸಮಾರಂಭಗಳಿಂದ ಹೆಚ್ಚಿನ ಜ್ಱಆನ ಪಡೆದುಕೊಳ್ಳಲು ಸಾಧ್ಯ ಎಂದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಪೂಜ್ಯ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ-ಮನುಷ್ಯನನ್ನು ಪ್ರೀತಿಸುವ ಕೆಲಸ ಆಗಬೇಕು. ಸಂಪತ್ತು ಸಮಾಜಕ್ಕೆ ಸದ್ಬಳಕೆಯಾಗಬೇಕು. ಉತ್ಸವ ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾಗದೆ ನಾಡಿನ ಉತ್ಸವವಾಗಿ ಹೊರಹೊಮ್ಮಬೇಕು. ಸಮಾಜದ ಕಟ್ಟಕಡೆಯ ಮನುಷ್ಯನನ್ನು ಬದುಕಿಸುವ ಕೆಲಸ ಆಗಬೇಕು. ಹೀಗಾಗಿ ಸಜ್ಜನ ಶಕ್ತಿಗಳು ಒಂದೆಡೆ ಸೇರಿದರೆ ಏನೆಲ್ಲಾ ಸಾಧಿಸಬಹುದು ಎಂದು ನುಡಿದರು.
ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ್ ಅಗಸರ್, ಉತ್ಸವದ ಅಖಿಲ ಭಾರತ ಸ್ವಾಗತ ಸಮಿತಿ ಅಧ್ಯಕ್ಷ ರವೀಂದ್ರ ಧಾರಿಯಾ ಮಾತನಾಡಿದರು. ಕಾರ್ಯಾಧ್ಯಕ್ಷೆ ಕೆ.ಲೀಲಾ ಲಕ್ಷಾ ರೆಡ್ಡಿ, ಭಾರತ ವಿಕಾಸ ಸಂಗಮ ರಾಷ್ಟಿಯ ಸಂಚಾಲಕ ಮಾಧವ ರೆಡ್ಡಿ ವೈ, ಸುಧಾಕರ ರೆಡ್ಡಿ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧಾ ಪಾಟೀಲ್ ಇತರರು ಇದ್ದರು.
ವಿಕಾಸ ಅಕಾಡೆಮಿ ವಿಶ್ವಸ್ಥ, ಭಾರತ ಸಂಗಮ ಉತ್ಸವದ ಸಹ ಸಂಯೋಜಕ ಮಾರ್ತಾಂಡ ಶಾಸ್ತಿç ನಿರೂಪಿಸಿದರು. ಶೃತಿ ರಮೇಶ ಕುಲಕರ್ಣಿ ಪ್ರಾರ್ಥಿಸಿದರು. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ ಪ್ರಾಸ್ತಾವಿಕ ಮಾತನಾಡಿದರು.