

ಯಲ್ಲಾಪುರ: ಕರೊನಾ ವೈರಸ್ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರ್ವಿುಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕಾರ್ವಿುಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಅವರು ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಕಾರ್ವಿುಕರು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಪ್ರತಿಯೊಬ್ಬರೂ ಮಾಸ್ಕ್ಗಳನ್ನು ಬಳಸಲು ಸೂಚಿಸಲಾಗಿದೆ. ಕಾರ್ವಿುಕರಿಗೆ ಉಚಿತವಾಗಿ ಸೋಪ್, ಸ್ಯಾನಿಟೈಸರ್ ಮತ್ತು ಮಾಸ್ಕ್ಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ವಿುಕ ಇಲಾಖೆ ಮತ್ತು ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿ ವ್ಯಾಪ್ತಿಗೆ ಒಳಪಡುವ ಕಟ್ಟಡ ಕಾರ್ವಿುಕರು, ಅಸಂಘಟಿತ ಕಾರ್ವಿುಕರಿಗೆ ಕರೊನಾ ವೈರಸ್ ಸೋಂಕಿನಿಂದ ತಡೆಗಟ್ಟಲು ಅರಿವು ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದಕ್ಕೆ ತಗಲುವ ವೆಚ್ಚವನ್ನು ಮಂಡಳಿಯ ಮೂಲಕ ಭರಿಸಲು ಸೂಚಿಸಲಾಗಿದ್ದು, ಕಾರ್ವಿುಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಎಜೆನ್ಸಿ, ಎನ್ಜಿಒಗಳ ಮೂಲಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಟಿಬೆಟಿಯನ್ ಕ್ಯಾಂಪ್ನಲ್ಲಿ ನಿಷೇಧಾಜ್ಞೆ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು. ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ಗೆ ಸಾಕಷ್ಟು ಟಿಬೆಟಿಯನ್ನರು ಬರುತ್ತಿದ್ದು, ಮುಂಡಗೋಡ ಪಟ್ಟಣದಲ್ಲಿ ಅನಗತ್ಯವಾಗಿ ಸಂಚರಿಸುತ್ತಿರುತ್ತಾರೆ. ಇದರಿಂದ ಸ್ಥಳೀಯವಾಗಿ ಆತಂಕ ಉಂಟಾಗುತ್ತಿದ್ದು, ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ. ಕಾರಣ ಜನರಲ್ಲಿನ ಭೀತಿ ನಿವಾರಿಸುವ ಜತೆ, ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದನ್ವಯ ಮಾ.31ರವರೆಗೆ ಟಿಬೆಟಿಯನ್ ಕ್ಯಾಂಪ್ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದರು.
ದೇವಿ ಪ್ರತಿಷ್ಠಾಪನೆಗೆ ಪ್ರಮುಖರು ಮಾತ್ರ: ಮಾರಿಕಾಂಬಾ ದೇವಿ ಪ್ರತಿಷ್ಠಾಪನೆ ಯುಗಾದಿಯಂದು ನಡೆಯಲಿದ್ದು, ಅಂದು ಬಾಬುದಾರರು, ಅರ್ಚಕರು, ದೇವಾಲಯ ಆಡಳಿತ ಮಂಡಳಿ ಪ್ರಮುಖರಷ್ಟೇ ಸೇರಿ ದೇವಿ ಪ್ರತಿಷ್ಠಾಪನೆ ಮಾಡುವಂತೆ ಸೂಚಿಸಲಾಗಿದೆ. ಅಂದು ಭಕ್ತರಿಗೆ ಸೇರಲು ಅವಕಾಶ ನೀಡುವುದಿಲ್ಲ. ಪ್ರಮುಖ ದೇವಾಲಯಗಳು, ಮಠಮಂದಿರಗಳಿಗೆ ಭಕ್ತರು ಬರದಂತೆ ಸೂಚಿಸುವಂತೆ ಪ್ರಮುಖರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಪೌರಾ ಯುಕ್ತ ರಮೇಶ ನಾಯಕ, ತಾಲೂಕು ಆರೋಗ್ಯ ಅಧಿಕಾರಿ ವಿನಾಯಕ ಭಟ್ಟ, ಸಿಡಿಪಿಒ ದತ್ತಾತ್ರೇಯ ಭಟ್ಟ ಇದ್ದರು.
ಮಠಕ್ಕೆ ಭೇಟಿ ನೀಡದಂತೆ ಸೂಚನೆ: ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಸ್ವರ್ಣವಲ್ಲೀ ಮಠಕ್ಕೆ ಕೆಲ ದಿನ ಭಕ್ತರು ಆಗಮಿಸದಂತೆ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಈ ನಿರ್ಣಯ ಕೈಗೊಂಡಿದ್ದು, ಭಕ್ತಾದಿಗಳು ಕೆಲವು ದಿನ ಮಠಕ್ಕೆ ಆಗಮಿಸಬಾರದು. ಮಠದಲ್ಲಿ ಮುಂದಿನ 20 ದಿನಗಳಲ್ಲಿ ನಡೆಯುವ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದ್ದು, ಭಕ್ತಾದಿಗಳು ತಮ್ಮ-ತಮ್ಮ ಮನೆಗಳಲ್ಲಿ ಕೈಕೊಳ್ಳಲು ನಿರ್ಧರಿಸಿರುವ ಮಂಗಲಕಾರ್ಯ ಇತ್ಯಾದಿಗಳನ್ನು ಕಡ್ಡಾಯವಾಗಿ ಮುಂದೂಡಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.